ರಾಜ್ಯ

ಮೈಸೂರು ವಿವಿಗೆ 27ನೇ ಶ್ರೇಣಿ: ಸಚಿವ ಸೋಮಶೇಖರ್ ಅಭಿನಂದನೆ

Nagaraja AB

ಬೆಂಗಳೂರು: ನ್ಯಾಷನಲ್  ಇನ್ಸ್ಟಿಟ್ಯೂಟ್ ಆಫ್ ರ‍್ಯಾಂಕಿಂಗ್ ಫ್ರೇಮ್ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯ  ಪಾತ್ರವಾಗಿದ್ದು, 27ನೇ ಶ್ರೇಣಿ (Rank) ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಈ  ಮೂಲಕ ಮೈಸೂರು ವಿಶ್ವವಿದ್ಯಾಲಯಕ್ಕೆ ಮತ್ತೊಂದು ಗರಿ ಮೂಡಿದಂತಾಗಿರುವುದಕ್ಕೆ ಅಭಿನಂದನೆ  ಸಲ್ಲಿಸುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಈ  ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ಎಂಎಚ್ ಆರ್ ಡಿ ಅಡಿಯಲ್ಲಿ ಕೊಡಮಾಡಲಾಗುತ್ತದೆ.  ಭಾರತದಲ್ಲಿರುವ ಎಲ್ಲ ವಿವಿಧ ವಿಶ್ವವಿದ್ಯಾಲಯಗಳ ಸಾಧನೆಗಳನ್ನು  ಮಾನದಂಡಗಳನ್ನು  ಇಟ್ಟುಕೊಂಡು ರ‍್ಯಾಂಕಿಂಗ್  ಕೊಡಲಾಗುತ್ತದೆ. ಈಗ ಹೆಮ್ಮೆಯ ವಿಚಾರವೆಂದರೆ ಪ್ರಸಕ್ತ  ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯವು 27ನೇ ರಾಂಕ್ ಗೆ ಭಾಜನವಾಗಿರುವುದನ್ನು ಕೇಳಿ  ಸಂತಸವಾಗಿದೆ ಎಂದಿದ್ದಾರೆ. 

ಇನ್ನು ಐಐಟಿ,  ಐಐಎಸ್ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಮಾನದಂಡವನ್ನಾಗಿ ಪರಿಗಣಿಸಿ ಕೊಡಲಾಗುವ  ರ‍್ಯಾಂಕಿಂಗ್ ನಲ್ಲಿ ಮೈಸೂರು ವಿಶ್ವವಿದ್ಯಾಲಯವು 47ನೇ ರಾಂಕ್ ಪಡೆದುಕೊಂಡಿದೆ.  ಅಲ್ಲದೆ, ಈಗ ಲಭಿಸಿರುವ 27ನೇ ರಾಂಕ್ ಸ್ಥಾನವು ಕಳೆದ ವರ್ಷ 54ನೇ ಸ್ಥಾನದಲ್ಲಿತ್ತು.  ಅಂದರೆ ಈ ಪ್ರಮಾಣ ಉತ್ತಮಗತಿಯಲ್ಲಿ ಸಾಗಿದೆ ಎಂಬುದು ಖಾತ್ರಿಯಾದಂತಾಗಿದೆ.

 ಎನ್ಐಆರ್ ಎಫ್  ರ‍್ಯಾಂಕಿಂಗ್ ನಿಂದ ಹಲವು ಉಪಯೋಗಗಳಿವೆ. ಕೆಲವೊಂದು ಪ್ರಾಜೆಕ್ಟ್ ಗಳಿಗೆ ಅರ್ಜಿ ಹಾಕುವ  ಸಂದರ್ಭದಲ್ಲಿ ನೀವು ಎನ್ಐಆರ್ ಎಫ್ ರ‍್ಯಾಂಕ್  ಪಟ್ಟಿಯಲ್ಲಿ 50ರೊಳಗೆ ಇದ್ದರೆ ಮಾತ್ರ  ಅನುಮತಿ ಕೊಡಲಾಗುತ್ತಿರುವುದರಿಂದ ಅಂತಹ ಸೌಲಭ್ಯವನ್ನು ವಿಶ್ವವಿದ್ಯಾಲಯ  ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ವಿಶ್ವವಿದ್ಯಾಲಯವು ಇನ್ನೂ ಹೆಚ್ಚಿನ ಸಾಧನೆಗಳನ್ನು  ಮಾಡಲಿ ಎಂದು ಆಶಿಸುವುದಾಗಿ ಸೋಮಶೇಖರ್ ತಿಳಿಸಿದ್ದಾರೆ.

SCROLL FOR NEXT