ರಾಜ್ಯ

ಕೋವಿಡ್-19 ಪಾಸಿಟಿವ್ ಇದ್ದರೂ ತಲೆಮರೆಸಿಕೊಳ್ಳುತ್ತಿದ್ದವರಿಗೆ ಶಾಕಿಂಗ್ ನ್ಯೂಸ್!

Nagaraja AB

ಬೆಂಗಳೂರು: ಕೋವಿಡ್ -19 ಪಾಸಿಟಿವ್ ಮಾಹಿತಿ ತಿಳಿಯುತ್ತಿದ್ದಂತೆ ತಿಳಿಯುತ್ತಿದ್ದಂತೆ ತಲೆಮರೆಸಿಕೊಳ್ಳುತ್ತಿದ್ದ ಜನರ ಸಂಖ್ಯೆ ಹೆಚ್ಚಾಗುತಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಬಿಎಂಪಿ ಹೊಸ ಕಾರ್ಯತಂತ್ರವೊಂದನ್ನು ಅನುಸರಿಸುತ್ತಿದೆ. 

ಇನ್ನು ಮುಂದೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್-19 ಪರೀಕ್ಷೆಗೆ ಒಳಪಟ್ಟವರಿಗೆ ಪಾಸಿಟಿವ್ ಅಥವಾ ನೆಗೆಟಿವ್ ಎಂದು ಹೇಳುವುದಿಲ್ಲ, ವರದಿ ಬಂದಿದೆ, ಬಂದು ಸಂಗ್ರಹಿಸಿಕೊಳ್ಳಿ ಎಂದಷ್ಟೇ ಹೇಳುವುದಾಗಿ ಬಿಬಿಎಂಪಿ ಆಯುಕ್ತ ಬಿಹೆಚ್ ಅನಿಲ್ ಕುಮಾರ್ ಹೇಳಿದರು.

ಪರೀಕ್ಷಾ ವರದಿ ಸಂಗ್ರಹಿಸಿಕೊಳ್ಳಲು ಬರುತ್ತಿದ್ದಂತೆ ಪಾಸಿಟಿವ್ ಇದ್ದವರನ್ನು ಆಸ್ಪತ್ರೆಗೆ ಕಳುಹಿಸಲಾಗುವುದು, ನೆಗೆಟಿವ್ ಹೊಂದಿದ್ದವರನ್ನು ಮನೆಗೆ ವಾಪಸ್ ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.

ಕೊರೋನಾ ಸೋಂಕು ಹೊಂದಿರುವವರನ್ನು  ಕರೆತರಲು ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದಾಗ ಅವರೊಂದಿಗೆ ಬಾರದೆ ಅನೇಕ ಮಂದಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಸೋಂಕು ಹರಡುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಕೆಲವರು ತಪ್ಪಾದ ಫೋನ್ ನಂಬರ್ ಕೊಟ್ಟರೆ, ಮತ್ತೆ ಕೆಲವರ ಮೊಬೈಲ್ ಸ್ವೀಚ್ಢ್ ಆಫ್ ಆಗಿರುತ್ತದೆ. ಕೆಲ ಜನರು ತಪ್ಪಾದ ವಿಳಾಸ ನೀಡಿರುತ್ತಾರೆ. ಉತ್ತಮ ಸಂವಹನಕ್ಕಾಗಿ ಇಲಾಖೆಯಿಂದ ಪರ್ಯಾಯ ವಿಳಾಸದ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

ಇತರ ರಾಜ್ಯಗಳಿಂದ ಬಂದವರು ಹಾಗೂ ಐಎಲ್ ಐ, ಸಾರಿ ರೋಗಿಗಳಿಂದ ನಗರದಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಆದಾಗ್ಯೂ, ಇಂತಹ ಪ್ರಕರಣಗಳು ವಿರಳವಾಗಿವೆ. ಪಾದರಾಯನಪುರ, ಹೊಂಗಸಂದ್ರದಲ್ಲಿ ಇದ್ದಂತೆ ಇಲ್ಲ ಎಂದು ಸ್ಪಷ್ಪಪಡಿಸಿದರು. 

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪರೀಕ್ಷೆ ಮಾಡುತ್ತಿರುವುದರಿಂದ ನಗರದಲ್ಲಿ ಹೆಚ್ಚಾಗಿ ಸೋಂಕು ಪ್ರಕರಣಗಳು ಕಂಡುಬರುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರ ಮಾತ್ರವಲ್ಲ, ಜನರ ಪಾತ್ರವೂ ಪ್ರಮುಖವಾಗಿದೆ ಎಂದು ಅನಿಲ್ ಕುಮಾರ್ ತಿಳಿಸಿದರು. 

SCROLL FOR NEXT