ರಾಜ್ಯ

ಭೂ ಸುಧಾರಣಾ ತಿದ್ದುಪಡಿ ಕಾಯಿದೆ‌ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆದ ಬಸವರಾಜ ಹೊರಟ್ಟಿ

Srinivasamurthy VN

ಬೆಂಗಳೂರು: ರೈತ ನಾಯಕನೆಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ರೈತರ ಬಾಯಿಗೆ ಮಣ್ಣು ಹಾಕಲು ಹೊರಟಿದ್ದೀರಿ ಎಂದು ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಯವರಿಗೆ ಖಾರವಾಗಿ ಪತ್ರ ಬರೆದಿದ್ದಾರೆ.

ಕರ್ನಾಟಕ ಹೈಕೋರ್ಟ್ ಆದೇಶದ ನೆಪವೊಡ್ಡಿ ಭೂಕಂದಾಯ ನಿಯಮಾವಳಿಗೆ ತಿದ್ದುಪಡಿ ತಂದಿರುವುದು ದೊಡ್ಡ ಆಘಾತ ತಂದಿದೆ. ಬೇರೆ ಯಾವುದೇ ರಾಜ್ಯದಲ್ಲಿಯೂ ಇಲ್ಲದ ಕಾನೂನು ನಮ್ಮ‌ ರಾಜ್ಯದಲ್ಲಿ ತಂದು ಕೃಷಿಕರ ಭೂಮಿ‌ ಕಬಳಿಸುವ ಹುನ್ನಾರ ಅಡಗಿದೆ. ಕಪ್ಪು ಹಣವುಳ್ಳವರಿಗೆ, ರಿಯಲ್ ಎಸ್ಟೇಟ್ ಮಾಡುವವರಿಗೆ ಅನ್ನದಾತರ ಜಮೀನು ಕಬಳಿಸಲು ರಹದಾರಿ ನೀಡಿದ್ದೀರಿ ಎಂದು ಪತ್ರದಲ್ಲಿ ಹೊರಟ್ಟಿ ಟೀಕಿಸಿದ್ದಾರೆ.

ಸರ್ಕಾರದ ನಿಲುವು ಮೂರ್ಖತನದ ಪರಮಾವಧಿ. ಕಾನೂನು ಜಾರಿಗೊಳಿಸಿದ್ದೇ ಆದರೆ ರೈತರು ಬಂಡಾಯವೇಳುವ ಕಾಲ ಸನ್ನಿಹಿತವಾಗಿದೆ. ಅನ್ನ ನೀಡುವ ರೈತ ಬಾಯಿಗೆ ಮಣ್ಣುಹಾಕುವ ಕೆಟ್ಟ ಕಾನೂನು ಜಾರಿಗರ ತರುವುದು ಸೂಕ್ತವಲ್ಲ. ರೈತರ ಮತ್ತಷ್ಟು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಣೆ ನೀಡಿದ್ದೀರಿ. ಕೃಷಿ ಮಾಡುವುದು ಕಂಪ್ಯೂಟರ್ ದ ಕೆಲಸದಂತಲ್ಲ. ಪುಸ್ತಕ ಓದಿ ಅಡುಗೆ ಮಾಡಿದಂತೆ ಕೃಷಿ ಮಾಡಲು ಸಾಧ್ಯವಿಲ್ಲ. ಕರಾಳ ಶಾಸನ ತರುವುದೇ ಅವಿವೇಕದ ಪರಮಾವಧಿ. ಆದ್ದರಿಂದ ಭೂ ಸುಧಾರಣಾ ಕಾಯಿದೆ ತದ್ದುಪಡಿ ಹಿಂಪಡೆದು ವಿಧಾನ ಸಭೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಿ ಅಲ್ಲಿಯವರೆಗೆ ತಿದ್ದುಪಡಿ ಜಾರಿ ತಡೆಹಿಡಿಯಿರಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕೇಂದ್ರ ಸರಕಾರ ಮತ್ತು ನೀವು ಉದ್ದಿಮೆದಾರರ ಕೈಗೊಂಬೆಯಾಗಿ ವರ್ತಿಸುತ್ತೀರಿ ಎಂಬ ಮಾತು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದ್ದರಿಂದ ತಕ್ಷಣ ಇದನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತೇನೆ. ಅಧಿವೇಶನ ಬರುವವರೆಗೆ ನೀವು ಸುಗ್ರೀವಾಜ್ಞೆ ಹೊರಡಿಸಬಾರದೆಂದು ಎಂದು ಬಸವರಾಜ ಹೊರಟ್ಟಿ, ಸಿಎಂಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

SCROLL FOR NEXT