ರಾಜ್ಯ

ಮೈಸೂರು: ಸೋಶಿಯಲ್ ಮೀಡಿಯಾದಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ದ ಆರೋಪಿ ಅಂದರ್

Raghavendra Adiga

ಮೈಸೂರು: ಕೊರೋನಾವೈರಸ್ ಕುರಿತು ಸಾಮಾಜಿಕ ತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದ ವ್ಯಕ್ತಿಯನ್ನು ಮೈಸೂರು ಪೋಲೀಸರು ಬಂಧಿಸಿದ್ದಾರೆ.

ನಂಜನಗೂಡು ನಿವಾಸಿ ಎಕ್ಸ್ಟೆನ್ಷನ್ ಬಡಾವಣೆಯ ಪ್ರಜ್ವಲ್ ಕಶ್ಯಪ್ ಬಂಧಿತ ಆರೋಪಿಯಾಗಿದ್ದು ಈತ "ನಂಜನಗೂಡು ಸಮಾಚಾರ" ಎನ್ನುವ ಹೆಸರಲ್ಲಿ ಕೊರೋನಾ ಬಗೆಗೆ ಫೆಸ್ ಬುಕ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದನೆಂದು ತಿಳಿದುಬಂದಿದೆ.

ಆರೋಪಿ ಪ್ರಜ್ವಲ್ ನಂಜನಗೂಡಿನ ಐವರಿಗೆ ಕೊರೋನಾ ಸೋಂಕಿದೆ ಎಂದು ಫೇಸ್ ಬುಕ್ ನಲ್ಲಿ ಬರೆದು ಹರಿಬಿಟ್ಟಿದ್ದ. ಇದನ್ನು ಕಂಡ ಬಡಾವಣೆಯ ಜನ ಗಾಬರಿಗೊಂಡಿದ್ದರು. 

ಮಹಾರಾಷ್ಟ್ರದಿಂದ ಆಗಮಿಸಿದ್ದ ಐವರಲ್ಲಿ ಕೊರೋನಾ ಸೋಂಕಿದೆ ಎಂದು ದೃಢವಾಗಿತ್ತಾದರೂ ಅವರಾರೂ ನಂಜನಗೂಡಿಗೆ ಆಗಮಿಸಿರಲಿಲ್ಲ. ಆದರೆ ಆರೋಪಿ ನಂಜನಗೂಡಿನ 4 ಬಡಾವಣೆಗಳ ಹೆಸರನ್ನು ಉಲ್ಲೇಖಿಸಿ ಇಲ್ಲಿನ ಐವರಿಗೆ ಕೊರೋನಾ ಇದೆ ಎಂದು ಸುದ್ದಿ ಹಾಕಿದ್ದ. ಇದರಿಂದಾಗಿ ಆ ಬಡಾವಣೆಗಳಲ್ಲಿ ವಾಸವಿದ್ದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಕಾರ್ಖಾನೆಗಳು ನಿರಾಕರಿಸಿದ್ದವು. 

ಈ ಸಂಬಂಧ ಶಂಕರಪುರ ಬಡಾವಣೆಯ ನಿವಾಸಿಗಳು ನಂಜನಗೂಡು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..

SCROLL FOR NEXT