ರಾಜ್ಯ

ಕೈ ಶಾಸಕರ ಪುತ್ರನ ವಿವಾಹದಲ್ಲಿ ಸಾಮಾಜಿಕ ಅಂತರಕ್ಕೆ ತಿಲಾಂಜಲಿ, ಮಾಸ್ಕ್ ಧರಿಸದೇ ಪಾಲ್ಗೊಂಡ ಆರೋಗ್ಯ ಸಚಿವ ಶ್ರೀರಾಮುಲು!

Raghavendra Adiga

ಬಳ್ಳಾರಿ: ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದರೂ ಜನನಾಯಕರೇ ಸಾಮಾಜಿಕ ಅಂತರವನ್ನು ಮರೆತು ಶುಭ ಸಮಾರಂಬಗಳನ್ನು ನಡೆಸುತ್ತಿರುವುದು ಮಾತ್ರ ವಿಪರ್ಯಾಸ. ಬಳ್ಳಾರಿ ಜಿಲ್ಲೆ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯಕ್  ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಸಾಮಾಜಿಕ ಅಂತರದ ನಿಯಮಾವಳಿಯನ್ನು ಗಾಳಿಗೆ ತೂರಿ ನೂರಾರು ಮಂದಿ ಪಾಲ್ಗೊಂಡಿದ್ದರು.

ಸೋಮವಾರ ಹರಪನಹಳ್ಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರನಾಯಕ್  ಅವರ ಪುತ್ರರ ವಿವಾಹ ಸಮಾರಂಭದಲ್ಲಿ ಸಾಮಾಜಿಕ ಅಂತರ ನಿಯಮ ಉಲ್ಲಂಘನೆಯಾಗಿದೆ. 

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಲಾಕ್‌ಡೌನ್ ನಿಯಮಗಳನ್ವಯ ವಿವಾಹ ಸಮಾರಂಭಗಳಲ್ಲಿ 50 ಕ್ಕಿಂತ ಹೆಚ್ಚು ಜನರಿಗೆ ಅನುಮತಿ ನೀಡಬಾರದು ಎಂದು ಸೂಚಿಸಲಾಗಿದೆ. ಆದರೆ ಶಾಸಕರ ಪುತ್ರನ ವಿವಾಹದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದಾರೆ. 

ಕಾಂಗ್ರೆಸ್ ಹಿರಿಯ ಮುಖಂಡರಾದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ  ಅವರೂ ಸಹ ಸಾಮಾಜಿಕ ಅಂತರವನ್ನು ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಇನ್ನು ರಾಜ್ಯ ಆರೋಗ್ಯ ಸಚಿವರಾಗಿರುವ ವ ಬಿ.ಶ್ರೀರಾಮುಲು ಅವರು ಮಾಸ್ಕ್ ಸಹ ಧರಿಸದೆ ಮದುವೆಯಲ್ಲಿ ಭಾಗವಹಿಸಿದ್ದು ಅನೇಕರ ಟೀಕೆಗೆ ಪಾತ್ರವಾಗಿದೆ. ಶ್ರೀರಾಮುಲು ವಿವಾಹ ಸಮಾರಂಬ ಹಾಗೂ ಮೆರವಣಿಗೆಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಎಲ್ಲೆಡೆಯಲ್ಲಿ ಸಾಮಾಜಿಕ ಅಂತರ ಪಾಲನೆಯನ್ನು ಕೈಬಿಡಲಾಗಿದೆ. 

ಪ್ರಸ್ತುತ ಕರ್ನಾಟಕದಲ್ಲಿ 7,000 ಕೋವಿಡ್ ಪ್ರಕರಣಗಳು ದಾಕಲಾಗಿದೆ. 

ಎಫ್‍ಐಆರ್ ದಾಖಲು

ವಿವಾಹ ಸಮಾರಂಬದಲ್ಲಿ ಕೊರೋನಾ ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘನೆಯಾಗಿರುವ ಕಾರಣ  ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ವಿರುದ್ಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೋವಿಡ್ 19 ಮಾರ್ಗದರ್ಶಿ ನಿಯಮಗಳ ಉಲ್ಲಂಘನೆ ಮೇಲೆ ಶಾಸಕರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.. 

SCROLL FOR NEXT