ರಾಜ್ಯ

ವಕೀಲ ನೌಶಾದ್ ಹತ್ಯೆ ಪ್ರಕರಣ: ಭೂಗತ ಪಾತಕಿ ರವಿ ಪೂಜಾರಿ 10 ದಿನ ಸಿಸಿಬಿ ವಶಕ್ಕೆ

Shilpa D

ಬೆಂಗಳೂರು: ನ್ಯಾಯವಾದಿ ನೌಶಾದ್ ಕಾಶಿಂಜಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ, ಭೂಗತ ಪಾತಕಿ ರವಿ ಪೂಜಾರಿಯನ್ನು 10 ದಿನಗಳ ಕಾಲ ಬೆಂಗಳೂರು ನಗರ ಸಿಸಿಬಿ ವಶಕ್ಕೆ ಒಪ್ಪಿಸಲಾಗಿದೆ.

2004ರ ಏ.9ರಂದು ಮಂಗಳೂರಿನ ಪಳ್ನೀರ್‌ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿಯೇ ನೌಶಾದ್‌ ಅವರನ್ನು ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಭೂಗತ ದೊರೆ ದಾವೂದ್‌ ಇಬ್ರಾಹಿಂ ಸಹಚರ ರಶೀದ್‌ ಮಲಬಾರಿ ಪರವಾಗಿ ನೌಶಾದ್‌ ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸಿದ್ದರು.ಇದರಿಂದ ಆಕ್ರೋಶಗೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿ, ತನ್ನ ಸಹಚರರ ಮೂಲಕ ವಕೀಲ ನೌಶಾದ್ ಅವರನ್ನು ಹತ್ಯೆ ಮಾಡಿಸಿದ್ದ. 

ಇದನ್ನ ಮಂಗಳೂರಿನ ಪೊಲೀಸರೇ ತನಿಖೆ ನಡೆಸುತ್ತಿದ್ದರು. ಆದರೆ ಇದೀಗ ಡಿಜಿ& ಐಜಿಪಿ ಪ್ರವೀಣ್ ಸೂದ್ ಈ ಕೇಸನ್ನ ತನಿಖೆ ನಡೆಸುವಂತೆ ಸಿಸಿಬಿಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಮಂಗಳೂರಿನಿಂದ ಸಿಸಿಬಿಗೆ ಈ ಕೇಸ್‌ ವರ್ಗಾವಣೆಯಾಗಿದೆ. ವಿಚಾರಣೆಗಾಗಿ ಸಿಸಿಬಿ 10 ದಿನ ರವಿ ಪೂಜಾರಿಯನ್ನ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಹಲವು ವರ್ಷಗಳ ಹಿಂದೆ ಮಂಗಳೂರಿನ ವಕೀಲರೊಬ್ಬರನ್ನ ಹಣದ ವಿಚಾರಕ್ಕೆ ರವಿ ಪೂಜಾರಿ ಕೊಲೆ ಮಾಡಿಸಿದ ಅನ್ನುವ ಆರೋಪವಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.
 

SCROLL FOR NEXT