ಬೆಂಗಳೂರು: ಮಾಸ್ಕ್ ಡೇ ಪ್ರಯುಕ್ತ ವಿಧಾನಸೌಧದಿಂದ ಕಬ್ಬನ್ ಪಾರ್ಕ್ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಆರ್. ಅಶೋಕ್ , ಸುರೇಶ್ ಕುಮಾರ್, ಸಿ.ಟಿ.ರವಿ, ಡಾ.ಕೆ.ಸುಧಾಕರ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಇತರೆ ಗಣ್ಯರು ಭಾಗಿಯಾಗಿದ್ದರು.
ಇದೇ ವೇಳೆ ಆರ್. ಕೆ ಟ್ರಸ್ಟ್ ವತಿಯಿಂದ 10 ಲಕ್ಷ ಮಾಸ್ಕ್ಗಳ ವಿತರಣೆಯನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಸೋಂಕು ನಿಯಂತಿಸಲು ಹಾಗೂ ಜನಸಮುದಾಯದಲ್ಲಿ ಜಾಗೃತಿ ಮೂಡಿಸಲು ಮಾಸ್ಕ್ ಡೇ ಆಚರಿಸುತ್ತಿದ್ದೇವೆ. ಪಾದಯಾತ್ರೆ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲು ಸೂಚಿಸಲಾಗಿದೆ ಎಂದರು.
ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ದೃಷ್ಟಿಯಿಂದ ಇಂದು ಮಾಸ್ಕ್ ಡೇ ಆಚರಣೆ ಮಾಡಲಾಗುತ್ತಿದೆ. ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಮಾಸ್ಕ್ ಧರಿಸುವುದು, ಸೋಪಿನಿಂದ ಆಗಾಗ್ಗೆ ಕೈ ತೊಳೆದುಕೊಳ್ಳುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಮಾಡುವುದು ಪ್ರಮುಖವಾದ ಅಂಶಗಳಾಗಿವೆ. ಸೋಂಕನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ನಾಗರಿಕರು ಕೂಡ ಕೈಜೋಡಿಸಬೇಕು. ಮಾಸ್ಕ್ ಧರಿಸುವುದರಿಂದ ಕೊರೋನಾ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ ಎಂದರು.
ನಿಮ್ಮನ್ನು ನೀವು ರಕ್ಷಿಸಲು ಮತ್ತು ಇತರರನ್ನು ರಕ್ಷಿಸಲು ಮಾಸ್ಕ್ ಧರಿಸುವುದರಿಂದ ಸಾಧ್ಯ. ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಸ್ವಚ್ಛತೆ ಜೀವನ ಶೈಲಿಯಾಗಬೇಕು. ಮನೆ, ಕಚೇರಿ ಮತ್ತು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ನಾಗರಿಕರು ಪಾಲಿಸಿದಾಗ ಕೊರೊನಾ ವಿರುದ್ಧದ ನಮ್ಮ ಕೈ ಮೇಲಾಗುತ್ತದೆ. ಕೋವಿಡ್-19 ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ. ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ಮೋದಿ ಕೂಡ ನಾವು ತೆಗೆದುಕೊಂಡ ಬಿಗಿ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಡೀ ದೇಶದಲ್ಲಿ ಕೊರೊನಾ ಹರಡುವುದನ್ನು ತಡೆಯುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಸ್ವಾಗತಾರ್ಹ ಎಂದು ಹೇಳಿದ್ದಾರೆ ಎಂದರು.
ಪರೀಕ್ಷಾ ಕಿಟ್, ವೆಂಟಿಲೇಟರ್, ಇಪಿಐ ಕಿಟ್, ಎನ್-95 ಮಾಸ್ಕ್ , ಸಂಚಾರಿ ಫಿವರ್ ಕ್ಲಿನಿಕ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಕರ್ಯಗಳನ್ನು ರಾಜ್ಯ ಸರ್ಕಾರ ಪೂರೈಸಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಎಲ್ಲಾ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿವೆ. ಅಧಿಕಾರಿ ವರ್ಗದವರು ವಿಶೇಷ ಆಸಕ್ತಿ ವಹಿಸಿ ಈ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಆರೋಗ್ಯ ಕಾರ್ಯಕರ್ತರು, ಪೊಲೀಸರು ಮತ್ತು ಇತರ ವಾರಿಯರ್ಸ್‌ಗಳು ತಮ್ಮ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಸಹಕಾರದಿಂದ ರಾಜ್ಯದಲ್ಲಿ ಸೋಂಕು ನಿಯಂತ್ರಿಸಲು ಸಾಧ್ಯವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಂಡು ಸೋಂಕು ನಿಯಂತ್ರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಹೊರರಾಜ್ಯಗಳಿಂದ ಬರುವವರನ್ನು ತಡೆಯುವುದರಲ್ಲಿ ನಾವು ಯಶಸ್ವಿಯಾಗಿದ್ದರೆ ಇನ್ನೂ ಹೆಚ್ಚು ರಾಜ್ಯದಲ್ಲಿ ಸೋಂಕು ತಡೆಯುವುದರಲ್ಲಿ ಯಶಸ್ವಿಯಾಗುತ್ತಿದ್ದೆವು. ಆದರೂ ಕಾಲ ಮಿಂಚಿಲ್ಲ. ಇನ್ನೂ ಹೆಚ್ಚು ಪ್ರಯತ್ನ ಮಾಡಿದರೆ ಸಾಧ್ಯವಿದೆ ಎಂದರು.