ರಾಜ್ಯ

'ಚೀನಾದೊಂದಿಗೆ ಸ್ಪರ್ಧೆ ಯೋಜನೆ' ಏನಾಯಿತು: ಸರ್ಕಾರಕ್ಕೆ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ

Sumana Upadhyaya

ಬೆಂಗಳೂರು: ಕೊರೋನಾ ವೈರಸ್ ಮತ್ತು ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಗೆ ಸಂಬಂಧಪಟ್ಟಂತೆ ಗಡಿ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ನಂತರ ಚೀನಾ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಚೀನಾ ಉತ್ಪನ್ನಗಳನ್ನು ಬಳಸದಂತೆ ಜನರಿಗೆ ಕರೆ ನೀಡುತ್ತಿವೆ.

ಇಂತಹ ಸಂದರ್ಭದಲ್ಲಿ, ನಾನು ಮುಖ್ಯಮಂತ್ರಿಯಾಗಿದ್ದಾಗ 2018ರಲ್ಲಿ ಚೀನಾದೊಂದಿಗೆ ಸ್ಪರ್ಧೆ ಎಂಬ ಯೋಜನೆಯನ್ನು ರೂಪಿಸಿದ್ದೆ. ಅದು ಏನಾಯಿತು, ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗಿಲ್ಲವೇಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ಗಮನ ಸೆಳೆದಿದ್ದಾರೆ.

ಚೀನಾದ ಉತ್ಪನ್ನಗಳಿಗೆ ಬ್ರೇಕ್ ಹಾಕಿ ದೇಶೀಯ ಉತ್ಪನ್ನ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಚೀನಾದೊಂದಿಗೆ ಸ್ಪರ್ಧೆ ಯೋಜನೆಗೆ 2 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡುವ ಬಗ್ಗೆ ಕೂಡ ತೀರ್ಮಾನಿಸಲಾಗಿತ್ತು. ಆದರೆ ಸದುದ್ದೇಶದ ಯೋಜನೆಯನ್ನು ಬಿಜೆಪಿ ಸರ್ಕಾರ ಮುಂದುವರಿಸಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ.

ಗಡಿಯಲ್ಲಿ ಸೈನಿಕರು ಹುತಾತ್ಮರಾದ ನಂತರ ಕೆಲವರಿಗೆ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಜ್ಞಾನೋದಯವಾಗಿದೆ. ಆದರೆ, ನನ್ನ ಅಧಿಕಾರವಧಿಯಲ್ಲಿ ಈ ಬಗ್ಗೆ ಗಂಭೀರವಾಗಿ ಯೋಚಿಸಲಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು ಬಾಯಿಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ. ಅದಕ್ಕೆ ರಚನಾತ್ಮಕ ಯೋಜನೆಗಳು ಬೇಕು. ಮೈತ್ರಿ ಸರ್ಕಾರದ ಯೋಜನೆಗಳು ಅದಕ್ಕೆ ಮಾದರಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

SCROLL FOR NEXT