ಬೆಂಗಳೂರು: ಮೋಸದಿಂದ ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಇಸ್ಪೀಟ್ ಎಲೆಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಎಲೆಕ್ಟ್ರಾನಿಕ್ ಸಾಧನಗಳಾದ ಮೈಕ್ರೋ ಕ್ಯಾಮರಾ, ಸ್ಕ್ಯಾನರ್, ಗುಪ್ತ ಕ್ಯಾಮರಾ ಮುಂತಾದ ಉಪಕರಣಗಳನ್ನು ಅಳವಡಿಸಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಸುಮಾರು 4 ಲಕ್ಷ ರೂ. ಮೌಲ್ಯದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಯಶವಂತಪುರ ಬಿ.ಕೆ.ನಗರ ನಿವಾಸಿ ಇಮ್ರಾನ್ (29) ಬಂಧಿತ ಆರೋಪಿ.
ಯಶವಂತಪುರದ ಬಿ.ಕೆ.ನಗರದ ಲಕ್ಷ್ಮೀ ವೆಂಟೇಶ್ವರ ನಿಲಯದ ತಳಮಹಡಿಯ ಮನೆಯಲ್ಲಿರುವ ವ್ಯಕ್ತಿ ಇಸ್ಪಿಟ್ ಆಟಕ್ಕೆ ಸಂಬಂಧಪಟ್ಟಂತೆ ಇಸ್ಪೀಟ್ ಆಟ ಆಡುವ ಸಮಯದಲ್ಲಿ ಮೋಸದಿಂದ ಅಕ್ರಮ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಇಸ್ಟೀಟ್ ಎಲೆಗಳಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಎಲೆಕ್ಟ್ರಾನಿಕ್ ಡಿವೈಸ್‌ಗಳಾದ ಮೈಕ್ರೋ ಕ್ಯಾಮರಾ, ಸ್ಕ್ಯಾನರ್, ಹಿಡನ್ ಕ್ಯಾಮರಾ ಮುಂತಾದ ಉಪಕರಣಗಳನ್ನು ಅಳವಡಿಸಿ ಅವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಸಂಗ್ರಹಣೆ ಮಾಡಿ ಇಟ್ಟುಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಎಲೆಕ್ಟ್ರಾನಿಕ್ಸ್ ಡಿವೈಸ್‌ಗಳ ಜೊತೆ ಮೈಕ್ರೋ ಕ್ಯಾಮರಾ, ಸ್ಕ್ಯಾನರ್, ಹಿಡನ್ ಕ್ಯಾಮರಾ, ಹೆಡ್ ಸ್ಪೀಕರ್‌ಗಳನ್ನು ಅಳವಡಿಸಿರುವ ಇಸ್ಪೀಟ್ ಕಾರ್ಡುಗಳು, ಮೊಬೈಲ್ ಫೋನ್, ಕೀ ಚೈನ್, ರಿಮೋಟ್ ಕನ್ನಡಕ, ಶರ್ಟ್, ಪ್ಯಾಂಟ್, ಶೂ, ಬೆಲ್ಟ್, ವಾಚು, ಚಾರ್ಜಿಂಗ್ ಲೈಟರ್, ಪರ್ಸ್, ಕೈಸ್ಲೀವ್ಸ್, ರಿಸ್ಟ್ ಬ್ಯಾಂಡ್, ನೋಟಿನ ಮಧ್ಯೆ ಅರ್ಧಕ್ಕೆ ಚೌಕಾಕಾರವಾಗಿ ಕಟ್ಟು ಮಾಡಿ ಅದರ ಒಳಗೆ ಎಲೆಕ್ಟ್ರಾನಿಕ್ಸ್ ಡಿವೈಸ್ ಅಳವಡಿಸಿರುವ 500 ರೂ. ಮುಖ ಬೆಲೆಯ 6 ನೋಟಗಳ ಒಂದು ಕಟ್ಟು, 100 ರೂ. ಮುಖಬೆಲೆಯ ಬೆಲೆಯ 2 ಕಟ್ಟು ಹಾಗೂ ಇತ್ಯಾದಿ ಸುಮಾರು 4 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಉಪಕರಣಗಳನ್ನು ಉಪಯೋಗಿಸುವುದರಿಂದ ಇಸ್ಪೀಟ್ ಆಟ ಆಡುವ ಸಮಯದಲ್ಲಿ ಹುಕುಂ ಯಾವ ಇಸ್ಪೀಟ್ ಕಾರ್ಡ್‌ನಲ್ಲಿರುತ್ತದೆ ಎಂಬ ಮಾಹಿತಿಯನ್ನು ಉಪಕರಣಗಳನ್ನು ಇಟ್ಟುಕೊಂಡ ವ್ಯಕ್ತಿಗೆ ಹೆಡ್ ಸ್ಪೀಕರ್ ಮೂಲಕ ಮಾಹಿತಿ ಗೊತ್ತಾಗುತ್ತದೆ. ಇದರಿಂದ ಇತರರನ್ನು ಸೋಲಿಸಿ ಸುಲಭವಾಗಿ ಹಣ ಸಂಪಾದಿಸಬಹುದಾಗಿರುತ್ತದೆ.
ಆರೋಪಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ಇಸ್ಮಾಯೀಲ್ ಮತ್ತು ಪರ್ವಿಂದ್ ಸಿಂಗ್ ಅವರ ಪತ್ತೆ ಕಾರ್ಯ ಮುಂದುವರಿಸಲಾಗಿದೆ.
ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಡಿ.ಟಿ.ವಿರೂಪಾಕ್ಷಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.