ರಾಜ್ಯ

ಬೆಂಗಳೂರು: ತಪ್ಪು ಶ್ರಮಿಕ್ ರೈಲು ಹತ್ತಿದ ಮಧ್ಯಪ್ರದೇಶದ ವಲಸೆ ಕಾರ್ಮಿಕರು ತಲುಪಿದ್ದು ಉತ್ತರಪ್ರದೇಶ!

Nagaraja AB

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ 29 ವಲಸಿಗರ ಗುಂಪು ತಪ್ಪಾಗಿ ವಿಶೇಷ ಶ್ರಮಿಕ ರೈಲು ಹತ್ತಿದ್ದರಿಂದ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶಕ್ಕೆ ತಲುಪಿದ್ದಾರೆ.

ಜೂನ್ 16ರಂದು ರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ ರೈಲು ನಿಲ್ದಾಣದಿಂದ ಹೊರಟ ರೈಲು ಶುಕ್ರವಾರ ಉತ್ತರ ಪ್ರದೇಶದ ಗೋರಕ್ ಪುರ ತಲುಪಿದೆ. ಇದು ಮಧ್ಯಪ್ರದೇಶ ಮಾರ್ಗವಾಗಿ ತೆರಳುತ್ತಿರಲಿಲ್ಲ.

ಈ ಗೊಂದಲಕ್ಕೆ ಸಂಬಂಧಿಸಿದಂತೆ ಸ್ವಯಂ ಸೇವಕಿ ಅದಿತಿ ಚಾಂಚಣಿ ಅವರಿಗೆ ವಲಸೆ ಕಾರ್ಮಿಕರಿಂದ ಕರೆ ಬಂದಿದ್ದು, ಇಡೀ ವ್ಯವಸ್ಥೆಯನ್ನು ದೂಷಿಸಿದ್ದಾರೆ. ಅರಮನೆ ಮೈದಾನದ ತ್ರಿಪುರಾ ವಾಸಿನಿಯಲ್ಲಿ ಎಲ್ಲ ವಲಸೆ ಕಾರ್ಮಿಕರು ಸೇರುವಂತೆ ಮಾಡಿದ್ದರಿಂದಲೇ ಈ ಗೊಂದಲ ಉಂಟಾಗಿದೆ ಎಂದು ಆಕೆ ಹೇಳಿದ್ದಾರೆ. 

ಉತ್ತರ ಪ್ರದೇಶದ ಅನೇಕ ರೈಲುಗಳು ಮಧ್ಯ ಪ್ರದೇಶ ಮೂಲಕ ತೆರಳುತ್ತವೆ ಆದರೆ, ಈ ಶ್ರಮಿಕ ರೈಲು  ( ರೈಲು ನಂ. 06205) ಈ ಮಾರ್ಗದಲ್ಲಿ ತೆರಳುವ ಯೋಜನೆ ಇರಲಿಲ್ಲ. ಈ ಸಂಬಂಧ ವಲಸೆ ಕಾರ್ಮಿಕರಿಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕಿತ್ತು. ಆದರೆ, ಇದರ ಸಂಪೂರ್ಣ ಕೊರತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಕಡೆಗೆ ತೆರಳುತ್ತಿದ್ದ ಮತ್ತೊಂದು ರೈಲಿನ ಮೂವರು ವಲಸೆ ಕಾರ್ಮಿಕರಿಗೂ ಇದೇ ರೀತಿಯ ಪರಿಸ್ಥಿತಿ ಆಗಿದೆ. ಆ ರೈಲು ಶನಿವಾರ ಬೆಳಗ್ಗೆ ತಲುಪಿದೆ ಎಂದು ಅವರು ಹೇಳಿದ್ದಾರೆ. 

ಇದು ರೈಲ್ವೆಯಿಂದ ಆಗಿರುವ ತಪ್ಪಲ್ಲ, ರಾಜ್ಯವು ಟಿಕೆಟ್ ಕಾಯ್ದಿರಿಸುತ್ತದೆ ಮತ್ತು ಬಸ್‌ಗಳಲ್ಲಿ ವಲಸಿಗರನ್ನು ಕರೆತಂದು ರೈಲುಗಳನ್ನು ಹತ್ತಲು ಸಹಾಯ ಮಾಡುತ್ತದೆ. ರಾಜ್ಯಸರ್ಕಾರ ನೀಡಿದ ಸಲಹೆಯಂತೆ  ಈ ನಿರ್ದಿಷ್ಟ ಶ್ರಮಿಕ ರೈಲನ್ನು ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಮೂಲಕ ಓಡಿಸಲು ಉದ್ದೇಶಿಸಲಾಗಿತ್ತು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಬಂಧಗಳ ಅಧಿಕಾರಿ ಇ ವಿಜಯ ತಿಳಿಸಿದ್ದಾರೆ.

ಈ ರೈಲು ಸೇರಿದಂತೆ ನಾಲ್ಕು ಶ್ರಮಿಕ್ ವಿಶೇಷಗಳನ್ನು ಆ ದಿನ ಓಡಿಸಲಾಯಿತು.  ಆದರೆ, ಮಧ್ಯಪ್ರದೇಶದ ಮೂಲಕ ಯಾವುದೇ ರೈಲು ಓಡಿಸಲು ನಾವು ಸಲಹೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

SCROLL FOR NEXT