ರಾಜ್ಯ

ಲಡಾಖ್ ಗಡಿಯಲ್ಲಿ ಚೀನಾ ಸಂಘರ್ಷದ ವಾಸ್ತವ ಅರಿಯಲು ತನಿಖೆಗೆ ದೇವೇಗೌಡ ಆಗ್ರಹ

Manjula VN

ಬೆಂಗಳೂರು: ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ವಾಸ್ತವ ಸಂಗತಿಗಳನ್ನು ಅರಿತುಕೊಳ್ಳಲು ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಆಗ್ರಹಿಸಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸಿದ ಸರ್ವಪಕ್ಷಗಳ ಸಭೆ ಹಿನ್ನೆಲೆಯಲ್ಲಿ ದೇವೇಗೌಡರು ತಮ್ಮ ಅಭಿಪ್ರಾಯವನ್ನು ಪ್ರಕಟಣೆ ಮೂಲಕ ಹೊರಹಾಕಿದ್ದಾರೆ. 

ಪೂರ್ವ ಲಡಾಖ್'ನ ಗಲ್ವಾನ್ ಕಣಿವೆ ಬಳಿಕ ನಡೆದ ಘಟನೆ ಬಗ್ಗೆ ಇಡೀ ದೇಶವೇ ದಿಗ್ಭ್ರಮೆ ವ್ಯಕ್ತಪಡಿಸಿದೆ. ಅಲ್ಲಿ ನಡೆದ ವಾಸ್ತವ ಸಂಗತಿ ಏನೆಂಬುದರ ಬಗ್ಗೆ ಮನವರಿಕೆ ಮಾಡಿಕೊಡಲು ಸೂಕ್ತ ತನಿಖೆ ಅಗತ್ಯವಿದೆ ಎಂದು ಹೇಳಿದ್ದಾರೆ. 

ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾಧಿಕಾರಿಗಳು, ಯೋಧರ ಸ್ಥಿತಿಗತಿ, ರಾಜತಾಂತ್ರಿಕ ವ್ಯವಸ್ಥೆ ಕುರಿತ ಪರಿಸ್ಥಿತಿ ಮತ್ತು ಮಾತುಕತೆ ಪ್ರಗತಿ ಕುರಿತು ವಿರೋಧ ಪಕ್ಷದ ನಾಯಕರಿಗೆ ವಿವರವಾದ ಮಾಹಿತಿ ನೀಡಬೇಕು. ಗಡಿ ಸಂಘರ್ಷದ ಬಗ್ಗೆ ಮಾಧ್ಯಮಗಳಿಂದ ಮಾಹಿತಿಗಳು ಲಭ್ಯವಾಗಿದೆಯೇ ಹೊರತು ಇದೂವರೆಗೆ ನಿಖರ ವಿವರಗಳು ಕೇಂದ್ರದಿಂದ ದೊರೆತಿಲ್ಲ. ಹೀಗಾಗಿ ಜನತೆಗೆ ಖಚಿತ ಮಾಹಿತಿ ಒದಗಿಸುವಂತೆ ಕೋರಿದ್ದಾರೆ.

ಇದು ಪ್ರಚೋದನೆ ಮತ್ತು ಪ್ರತೀಕಾರದ ಸಮಯವಲ್ಲ. ಇತ್ತೀಚಿನ ದಿನಗಳಲ್ಲಿ, ಸಶಸ್ತ್ರ ಪಡೆಗಳನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲ ಮಾಧ್ಯಮಗಳು ನಕಲಿ ಮಾಹಿತಿ ಮತ್ತು ಅಗ್ಗದ ವಾಕ್ಚಾತುರ್ಯದಿಂದ ನಮ್ಮ ಸೈನಿಕರು ಮತ್ತು ರಾಜತಾಂತ್ರಿಕ ಸಿಬ್ಬಂದಿಯ ಪ್ರಾಣಕ್ಕೆ ಅಪಾಯವನ್ನುಂಟುಮಾಡುತ್ತಿವೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವಾಹಿನಿಗಳು ಈ ಕುರಿತು ವಿಶ್ಲೇಷಣೆ ಮತ್ತು ವರದಿ ಮಾಡುವುದನ್ನು ನಿಲ್ಲಿಸಬೇಕು ಎಂದು ಇದರ ಅರ್ಥವಲ್ಲ. ಆದರೆ ಬಲವಾದ ಭಾಷೆಯನ್ನು ಬಳಸಬಾರದು ಎಂದು ಒತ್ತಾಯಿಸುತ್ತೇನೆ. ಸಹಕಾರಿ ಸಂಸ್ಥೆಗಳಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ದೇಶೀಯ ರಾಜಕೀಯ ಮತ್ತು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ಬದಿಗಿರಸಲು ಸಾಧ್ಯವಿಲ್ಲ ಎಂದಿದ್ದಾರೆ.

SCROLL FOR NEXT