ರಾಜ್ಯ

ಇಂದು ಬೆಳಿಗ್ಗೆ 10.04ರಿಂದ ಸೂರ್ಯಗ್ರಹಣ: ಕುಕ್ಕೆ, ಧರ್ಮಸ್ಥಳ ಸೇರಿ ಹಲವು ದೇಗುಲಗಳು ಬಂದ್, ಗ್ರಹಣ ವೇಳೆ ದರ್ಶನವಿಲ್ಲ

Manjula VN

ಬೆಂಗಳೂರು: ಶಾರ್ವರಿ ಸಂವತ್ಸರದ ಮೊದಲ ಖಂಡಗ್ರಾಸ ಸೂರ್ಯಗ್ರಹಣ ಭಾನುವಾರ ರಾಜ್ಯದಲ್ಲಿ ಬೆಳಿಗ್ಗೆ 10.04 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1.38ರ ತನಕ ಇರಲಿದೆ. ಹೀಗಾಗಿ ಗ್ರಹಣದ ಸಂದರ್ಭದಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ್ಯಂತ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. 

ಇಂದು ಬೆಳಿಗ್ಗೆ 10.12ರಿಂದ 1.30ರವರೆಗೆ ಸೂರ್ಯಗ್ರಹಣ ಜರುಗುವ ಸಮಯದಲ್ಲಿ ದೇವಸ್ಥಾನಗಳಲ್ಲಿ ದೇವರನ್ನು ತೊಳೆಯುವ, ಪುಣ್ಯಾಹಗಳಿಂದ ಶುದ್ಧಿಗೊಳಿಸುವ, ಸಂಪೋಕ್ಷಣೆ ಮತ್ತಿತರೆ ಕಾರ್ಯಗಳು ನೆರವೇರಲಿವೆ. ಹೀಗಾಗಿ ಈ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಗ್ರಹಣ ಬಿಟ್ಟ ಕೂಡಲೇ ದೇವಾಲಯ ಮೂರ್ತಿ ಹಾಗೂ ಗೋಪುರ ಶುದ್ಧೀಕರಣಗೊಳಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. 

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬೆಳಿಗ್ಗೆ 5.30ರಿಂದ 9 ಗಂಟೆವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಿಗ್ಗೆ 6.30ರಿಂದ 10, ಮಧ್ಯಾಹ್ನ 3.30ರಿಂದ 5.30ರವರೆಗಷ್ಟೇ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಗ್ರಹಣದ ಸಂದರ್ಭದಲ್ಲಿ ಭಕ್ತರಿಗೆ ದೇಗುಲ ಪ್ರವೇಸ ನಿರ್ಬಂಧಿಸಲಾಗಿದೆ. 

ಬೆಂಗಳೂರು ನಗರದಲ್ಲಿರುವ ಗವಿಗಂಗಾಧರೇಶ್ವರ, ಕೋಟೆ ಆಂಜನೇಯ ಸ್ವಾಮಿ, ಕಾಡುಮಲ್ಲೇಶ್ವರ, ದೊಡ್ಡ ಗಣಪತಿ, ಬನಶಂಕರಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಯುವುದಿಲ್ಲ. ಶೃಂಗೇರಿ, ಗೋಕರ್ಣದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೈಸೂರಿನಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿಗೆ ಮೂರು ಬಾರಿ ಅಭಿಷೇಕ ನೆರವೇರಲಿದೆ. ಆದರೆ, ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇಲ್ಲ. 

SCROLL FOR NEXT