ರಾಜ್ಯ

ಕಿತ್ತಗಾನಹಳ್ಳಿ ಕೆರೆಗೆ ಮಾಲಿನ್ಯ: ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ದಂಡ ವಿಧಿಸಿದ ಹಸಿರು ನ್ಯಾಯಾಧೀಕರಣ

Srinivasamurthy VN

ನವದೆಹಲಿ: ಬೆಂಗಳೂರಿನ ಬೊಮ್ಮಸಂದ್ರ ವ್ಯಾಪ್ತಿಯ ಕಿತ್ತಗಾನಹಳ್ಳಿ ಕೆರೆಯ ಮಾಲಿನ್ಯ ತಡೆಗಟ್ಟಲು ವಿಫಲವಾದ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ ಜಿಟಿ) ದಂಡ ವಿಧಿಸಿದೆ. 

ನಿಯಮ ಉಲ್ಲಂಘಿಸಿದ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ 10 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮಾಲಿನ್ಯ ನಿಯಂತ್ರಣ ಮಾಡುವಲ್ಲಿ ವಿಫಲವಾದ ಕರ್ನಾಟಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ, ನಿಯಮ ಪಾಲನೆ ಮಾಡುವಂತೆ ಸೂಚಿಸಿದೆ.

ಮಾಲಿನ್ಯಕಾರಕ ವಸ್ತುಗಳು ಕೆರೆಯನ್ನು ಸೇರುತ್ತಿವೆ. ಸಂಸ್ಕರಿಸಿದ ಒಳಚರಂಡಿ ನೀರು, ಕೆರೆ ಪಾಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ನ್ಯಾಯಾಧೀಕರಣ ಹೇಳಿದೆ. ಮಾಲಿನ್ಯ ತಡೆಯಲು ವಿಫಲವಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಅರ್ಜಿದಾರ ಸಂಜಯ್ ರಾವ್ ಎಂಬವರು ನ್ಯಾಯಾಧೀಕರಣದ ಗಮನಕ್ಕೆ ತಂದಿದ್ದರು. 

ಇದು ಕ್ರಿಮಿನಲ್ ಅಪರಾಧವಾಗಿದೆ ಎಂದು ಪೀಠ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪುರಸಭೆ ಮತ್ತು ರಾಜ್ಯ ಸರ್ಕಾರ, ಸುಪ್ರೀಂಕೋರ್ಟ್ ಮತ್ತು ಎನ್ ಜಿಟಿ ಆದೇಶವನ್ನು ಪಾಲಿಸಿಲ್ಲ. ಇದು ದುರದೃಷ್ಟಕರ ವಿಷಯ, ತಕ್ಷಣವೇ ತ್ವರಿತ ಪರಿಹಾರ ಪಡೆದುಕೊಳ್ಳಬೇಕಿದೆ. ಪರಿಸರಕ್ಕೆ ಹಾನಿ ಮಾಡಿದ ಕಾರಣಕ್ಕಾಗಿ ದಂಡ ಪಾವತಿ ಮಾಡಿ ಎಂದು ಹೇಳಿದ ನ್ಯಾಯಾಧೀಕರಣ, ಪುರಸಭೆಗೆ 5 ಲಕ್ಷ ಮತ್ತು ರಾಜ್ಯ ಸರ್ಕಾರಕ್ಕೆ 10 ಲಕ್ಷ ದಂಡ ಆದೇಶ ವಿಧಿಸಿ ಆದೇಶ ಹೊರಡಿಸಿದೆ.

SCROLL FOR NEXT