ರಾಜ್ಯ

ಹೆಚ್ಚುತ್ತಿದೆ ಕೊರೋನಾ ವೈರಸ್ ಪ್ರಕರಣ; ರಾಜಕೀಯ ನಾಯಕರಲ್ಲಿ ಆತಂಕ, ಸಾರ್ವಜನಿಕ ಭೇಟಿ-ಸಭೆ ರದ್ದು

Sumana Upadhyaya

ಬೆಂಗಳೂರು: ಕರ್ನಾಟಕದಲ್ಲಿ ದಿನೇ ದಿನೇ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಹತ್ತು ದಿನಗಳಿಂದ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ.

ಇದು ಸಾರ್ವಜನಿಕ ಜೀವನದಲ್ಲಿ ನಿತ್ಯವೂ ಇರುವ ರಾಜಕೀಯ ನಾಯಕರಿಗೆ ಸಹಜವಾಗಿ ಆತಂಕ ತಂದಿದೆ.ಕೊರೋನಾ ಎಲ್ಲಿಂದ ಬರುತ್ತಿದೆ, ಯಾವ ಮೂಲದಿಂದ ಎಂದು ಪತ್ತೆಹಚ್ಚಲು ಸಾಧ್ಯವಾಗದಿರುವ ಸಂದರ್ಭದಲ್ಲಿ ರಾಜಕೀಯ ನಾಯಕರು, ಸರ್ಕಾರದ ಆಡಳಿತ ವರ್ಗ ಮತ್ತು ಸಚಿವರುಗಳು ತೀವ್ರ ಆತಂಕಕ್ಕೀಡಾಗಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಕುಟುಂಬದವರಿಗೆ ಕೊರೋನಾ ಬಂದ ಮೇಲಂತೂ ಆತಂಕ, ಭಯ ಸರ್ಕಾರದ ಜನಪ್ರತಿನಿಧಿಗಳಿಗೆ ಇನ್ನಷ್ಟು ಹೆಚ್ಚಾಗಿದೆ. ಈ ಪ್ರಕರಣವಾದ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಂದ ಹಿಡಿದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರವರೆಗೆ ತಮ್ಮ ಸಿಬ್ಬಂದಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಭೇಟಿ, ನಾಗರಿಕರ ಪ್ರವೇಶಕ್ಕೆ ಸದ್ಯಕ್ಕೆ ಅನುಮತಿಯಿಲ್ಲ, ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ ಎಂದು ಸಿದ್ದರಾಮಯ್ಯನವರ ಮನೆ ಎದುರು ಬೋರ್ಡ್ ಹಾಕಲಾಗಿದೆ.ಕಳೆದ ವರ್ಷವಷ್ಟೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಸಿದ್ದರಾಮಯ್ಯನರಿಗೆ ವೈದ್ಯರೂ ಸಹ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಹೇಳಿದ್ದಾರೆ. ಕಳೆದ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಕೆಲ ಕಾಂಗ್ರೆಸ್ ಮುಖಂಡರ ಜೊತೆ ವೇದಿಕೆ ಹಂಚಿಕೊಂಡದ್ದು ಬಿಟ್ಟರೆ ನಿನ್ನೆ ಹೊರಗೆಲ್ಲೂ ಹೋಗಿರಲಿಲ್ಲ.

77 ವರ್ಷದ ಸಿಎಂ ಯಡಿಯೂರಪ್ಪನವರು ನಿತ್ಯವೂ ಸಾವಿರಾರು ಮಂದಿಯನ್ನು ಭೇಟಿಯಾಗುವುದು, ಓಡಾಡುವುದು, ಕಚೇರಿಗೆ ಹೋಗುವುದು ನೋಡಿ ಅವರ ಕುಟುಂಬ ಸದಸ್ಯರು, ಸಿಬ್ಬಂದಿಗಳಿಗೆ ಸಹಜವಾಗಿ ಆತಂಕ ಉಂಟುಮಾಡಿದೆ. ಇದಕ್ಕಾಗಿ ಸಿಎಂ ಜೊತೆ ಹತ್ತಿರದಿಂದ ಭೇಟಿ ಮಾಡುವವರು, ಭೌತಿಕವಾಗಿ ಹೋಗಿ ಭಾಗವಹಿಸುವ ಸಭೆಗಳನ್ನು ಕಡಿಮೆ ಮಾಡಲು ಅವರ ಸಿಬ್ಬಂದಿ ನೋಡುತ್ತಿದ್ದಾರೆ. ನಿನ್ನೆ ಮುಖ್ಯಮಂತ್ರಿಗಳು ಯಾವುದೇ ಅಧಿಕೃತ ಸಭೆ, ಕೆಲಸಗಳಲ್ಲಿ ಭಾಗಿಯಾಗಿರಲಿಲ್ಲ. ಮುಖ್ಯಮಂತ್ರಿಗಳು ಈಗಾಗಲೇ ಎರಡು ಬಾರಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು ನೆಗೆಟಿವ್ ಬಂದಿತ್ತು.

SCROLL FOR NEXT