ರಾಜ್ಯ

ಕೋವಿಡ್-19: ಸೋಂಕಿತರ ಆರೈಕೆಗೆ ಹೋಟೆಲ್ ಬಳಕೆ, ಆಸ್ಪತ್ರೆಗಳ ಬೇಡಿಕೆಗಳಿಗೆ ಮಾಲೀಕರು ಬೇಸರ

Manjula VN

ಬೆಂಗಳೂರು: ಹೋಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಪರಿವರ್ತಿಸುವ ಕುರಿತು ಹೋಟೆಲ್ ಮಾಲೀಕರು ಹಾಗೂ ಖಾಸಗಿ ಆಸ್ಪತ್ರೆಗಳು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಾಥಮಿಕ ಸಭೆ ನಡೆಸಿದ್ದು, ಆಸ್ಪತ್ರೆಗಳ ಬೇಡಿಕೆಗಳಿಗೆ ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. 

ಹೋಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಮಾರ್ಪಡಿಸುವ ಮಾಲೀಕರುಗಳಿಗೆ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಪಡೆದ ಹಣವನ್ನೇ ಬಾಡಿಗೆ ಹಣವಾಗಿ ನೀಡಲಿದ್ದು, ಈ ಕೋವಿಡ್ ಕೇರ್ ಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಹಾಗೂ ನರ್ಸ್ ಗಳ ನೇಮಿಸಿ ಅವರಿಗೆ ನೀಡಲಾಗುವ ವೇತನ ಕುರಿತು ಚರ್ಚೆ ನಡೆಸುತ್ತಿದ್ದೇವೆ. ಕೋವಿಡ್ ಕೇರ್ ಕೇಂದ್ರಗಳಲ್ಲಿ ಆ್ಯಕ್ಸಿಮೀಟರ್, ಬಿಪಿ ಮಾನಿಟರ್, ಜ್ವರ ತಪಾಸಣೆ ಮಾಡುವ ಡಿವೈಸ್ ಇವುಗಳಿದ್ದರಷ್ಟೇ ಸಾಲದು, 24*7 ರಂತೆ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗಳನ್ನೂ ನೇಮಕ ಮಾಡುವ ಅಗತ್ಯವಿದೆ ಎಂದು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ ಸಂಘಟನೆಗಳ ಅಧ್ಯಕ್ಷ ಡಾ.ಆರ್.ರವೀಂದ್ರ ಅವರು ಹೇಳಿದ್ದಾರೆ. 

ಜೂನ್.22 ರಂದು ಸರ್ಕಾರ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿತ್ತು. ಪ್ರತೀ 100 ರೋಗಿಗಳಿಗೆ ಒಬ್ಬ ವೈದ್ಯರು ಹಾಗೂ 50 ರೋಗಿಗಳಿಗೆ ಓರ್ವ ನರ್ಸ್ ಇರಲೇಬೇಕು. ಎರಡು ವಾರಗಳ ಕಾರ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿ ಕ್ವಾರಂಟೈನ್ ಒಳಗಾಗಬೇಕು. ಒಂದು ವಾರಗಳ ಬಳಿಕ ಪರೀಕ್ಷೆಯಲ್ಲಿ ವೈರಸ್ ಇಲ್ಲ ಎಂಬುದು ದೃಢಪಟ್ಟ ಬಳಿಕ ಮನೆಗೆ ತೆರಳಬಹುದು ಎಂದು ತಿಳಿಸಿತ್ತು. 

ಆದರೆ, ಖಾಸಗಿ ಆಸ್ಪತ್ರೆಗಳ ಬೇಡಿಕೆಗಳಿಗೆ ಹೋಟೆಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಗತ್ಯಗಳ ಕುರಿತು ಅಧ್ಯಯನ ನಡೆಸುವಂತೆ ಆಸ್ಪತ್ರೆಗಳು ನಮಗೆ ತಿಳಿಸುತ್ತಿವೆ. ಆದರೆ, ನಮಗೆ ನಮ್ಮದೇ ಆದ ಸಮಸ್ಯೆಗಳಿವೆ. ಕ್ವಾರಂಟೈನ್ ನಲ್ಲಿರುವವರಿಗೆ ನಾವು ವಸತಿ ನೀಡಬಹುದು. ಆದರೆ, ಕೊರೋನಾ ಸೋಂಕಿತರ ನಿರ್ವಹಣೆ ಕಠಿಣವಾಗಿರುತ್ತದೆ. ಸೋಂಕಿತರಿಗೆ ವೈದ್ಯಕೀಯ ವ್ಯವಸ್ಥೆ, ಆರೋಗ್ಯ ತಪಾಸಣೆ ಯಾರು ಮಾಡುತ್ತಾರೆ? ಎಂದು ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘದ ಅಧ್ಯಕ್ಷ ಪಿಸಿ.ರಾವ್ ಅವರು ಹೇಳಿದ್ದಾರೆ. 

ಕೊರೋನಾ ಎಂದರೆ ನೌಕರರು ಭಯಪಡುತ್ತಿದ್ದಾರೆ. ಆಹಾರ ಹಾಗೂ ಶೌಚಾಲಯ ಬಳಕೆ ಮಾಡದೆಯೇ ಪಿಪಿಇ ಕಿಟ್ ಗಳ ಧರಿಸಿ 6 ಗಂಟೆಗಳ ಕಾಲ ಸುಧೀರ್ಘ ಕಾರ್ಯನಿರ್ವಹಿಸುವ ಕುರಿತು ನಮ್ಮ ನೌಕರರಿಗೆ ಅರಿವಿಲ್ಲ. ನೌಕರರಿಗೆ ವೈದ್ಯಕೀಯ ತರಬೇತಿಗಳಿಲ್ಲ. ತುರ್ತು ಪರಿಸ್ಥಿತಿ ಎದುರಾದರೂ, ಹೋಟೆಲ್ ಗಳಲ್ಲಿ ಅಗತ್ಯ ವ್ಯವಸ್ಥೆಗಳಿಲ್ಲ. ಪಿಪಿಇ ಕಿಟ್ಸ್ ಗಳ ದರ ಕೂಡ ಹೆಚ್ಚಾಗಿದೆ. ಅದಕ್ಕೆ ಅದರ ಹೊರೆಯನ್ನು ಯಾರು ಭರಿಸುತ್ತಾರೆಂದು ಪ್ರಶ್ನಿಸಿದ್ದಾರೆ.

SCROLL FOR NEXT