ರಾಜ್ಯ

ಕೊರೋನಾ ಭಯ: ಮೂರು ದಿನ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸೀಲ್ ಡೌನ್

Lingaraj Badiger

ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರಲ್ಲಿ‌ ಇತ್ತೀಚೆಗೆ ಕೊರೋನಾ ಹೆಚ್ಚಾಗಿ ವಕ್ಕರಿಸುತ್ತಿದ್ದು, ಇದೀಗ ನಗರ ಪೊಲೀಸ್ ಆಯುಕ್ತರ ಕಚೇರಿಗೂ ಕೊರೋನಾ ಕಾಲಿಟ್ಟಿದೆ.

ಬಂಧಿತ ಆರೋಪಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಪೊಲೀಸ್ ಸ್ಟೇಷನ್​ಗಳು ಸೀಲ್​ಡೌನ್ ಆಗಿವೆ. ಇದೀಗ ನಗರ ಪೊಲೀಸ್ ​ಆಯುಕ್ತರ ಕಚೇರಿಯೂ ಸೀಲ್​ಡೌನ್ ಮಾಡಿ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಆದೇಶಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಕರ್ತವ್ಯದಲ್ಲಿದ್ದ ಓರ್ವ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಆಯುಕ್ತರ ಕಚೇರಿಯನ್ನು ಜೂ. 27ರಿಂದ 29 ರವರೆಗೆ ಮೂರು ದಿನಗಳ ಕಾಲ‌ ಮುಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು, ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಮನೆಯಿಂದ ಅಥವಾ ಉಪ ವಿಭಾಗದ ಕಚೇರಿಯಿಂದ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ಪೊಲೀಸ್ ಆಯುಕ್ತರ ಕಚೇರಿಯಲ್ಲಿನ ನಗರ ನಿಯಂತ್ರಣ ಕೋಣೆಯಲ್ಲಿ ನಿಯಮಿತ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಇದರ ಹೊರತಾಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಯಾವುದೇ ಕೆಲಸ ನಿರ್ವಹಿಸುವುದಿಲ್ಲ ಎಂದು‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SCROLL FOR NEXT