ರಾಜ್ಯ

ಕರ್ನಾಟಕದಲ್ಲಿ ಸುಗಮ ಉದ್ಯಮಕ್ಕೆ ವಿಧೇಯಕ ಅಂಗೀಕರಿಸಿದ ಸಚಿವ ಸಂಪುಟ

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಿನ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳನ್ನು ಹೆಚ್ಚು ಆಕರ್ಷಿಸಲು ರಾಜ್ಯ ಸಚಿವ ಸಂಪುಟ ಸುಗಮ ಉದ್ಯಮಕ್ಕೆ ಕೈಗಾರಿಕೆಗಳಿಗೆ ಅವಕಾಶ ನೀಡುವ ವಿಧೇಯಕವನ್ನು ಜಾರಿಗೆ ತರಲು ಒಪ್ಪಿಗೆ ನೀಡಿದೆ.

ನಿನ್ನೆ ಸಭೆ ಸೇರಿದ ಸಚಿವ ಸಂಪುಟ ಕರ್ನಾಟಕ ಕೈಗಾರಿಕೆಗಳ ಕಾಯ್ದೆ 2002ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಕೈಗಾರಿಕೆಗಳ ಉದ್ಯಮ ನಡೆಸಲು ಹಲವು ಇಲಾಖೆಗಳಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ರಾಜ್ಯದಲ್ಲಿ ವಾಣಿಜ್ಯ ಉದ್ಯಮಗಳನ್ನು ನಡೆಸಬೇಕಾದರೆ ನೋಡಲ್ ಏಜೆನ್ಸಿಯ ಅನುಮತಿ ಪಡೆದಿರಬೇಕು, ಅದಕ್ಕೂ ಮೊದಲು ಹೂಡಿಕೆ ಸಮಿತಿಗಳ ಅನುಮತಿ ಪಡೆಯಬೇಕಾಗುತ್ತದೆ.

ಇನ್ನು ಮುಂದೆ ಕೈಗಾರಿಕೆಗಳನ್ನು ಸ್ಥಾಪಿಸಲು ಭೂ ಅಭಿವೃದ್ಧಿ, ಲೋಕೋಪಯೋಗಿ ಕೆಲಸ ಮತ್ತು ನಿರ್ಮಾಣ,ಯಂತ್ರಗಳ ಸ್ಥಾಪನೆಯ ಅನುಮತಿಗಳಿಗೆ ರಾಜ್ಯ ಉನ್ನತ ಮಟ್ಟದ ಅನುಮತಿ ಸಮಿತಿಯಿಂದ, ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮತಿ ಸಮಿತಿ ಅಥವಾ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಅನುಮತಿ ಸಮಿತಿಗಳಿಂದ ಅನುಮತಿ ಪಡೆದರೆ ಸಾಕಾಗುತ್ತದೆ.

ಸಚಿವ ಸಂಪುಟ ಸಮಿತಿ ನಿನ್ನೆ ನೀಡಿರುವ ಒಪ್ಪಿಗೆ ಪ್ರಕಾರ, ಕೈಗಾರಿಕೆಗಳು ಆರಂಭವಾದ ಮೂರು ವರ್ಷಗಳೊಳಗೆ ಅನುಮೋದನೆ ಪಡೆಯಬಹುದಾಗಿದೆ ಇಲ್ಲವೇ ಕೈಗಾರಿಕೆಗಳು ವಾಣಿಜ್ಯ ಕಾರ್ಯನಿರ್ವಹಣೆ ಹಂತ ತಲುಪಿದಾಗ ಸಿಗುತ್ತದೆ. 15 ಕೋಟಿ ರೂಪಾಯಿಗಳಿಗಿಂತ ಕಡಿಮೆ ಹೂಡಿಕೆ ಮಾಡಿರುವ ಕೈಗಾರಿಕೆಗಳು ಡಿಎಲ್ಎಲ್ ಡಬ್ಲ್ಯುಸಿಸಿಗಳಿಂದ ಅನುಮತಿ ಪಡೆಯಬಹುದು ಮತ್ತು 15 ಕೋಟಿ ರೂಪಾಯಿಗಳಿಗಿಂತ ಮೇಲೆ ಹೂಡಿಕೆ ಮಾಡಿದವರು ಎಸ್ಎಲ್ಎಸ್ ಡಬ್ಲ್ಯುಸಿಸಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ.

ಕರ್ನಾಟಕದಲ್ಲಿ ಕೈಗಾರಿಕೆ, ಉದ್ಯಮಗಳನ್ನು ನಡೆಸಲು ಇದು ಸರ್ಕಾರದ ಐತಿಹಾಸಿಕ ತಿದ್ದುಪಡಿಯಾಗಿದೆ. ಇಂತಹ ತಿದ್ದುಪಡಿಯನ್ನು ಈ ಹಿಂದೆ ರಾಜಸ್ತಾನ ಮತ್ತು ಗುಜರಾತ್ ಸರ್ಕಾರಗಳು ಮಾತ್ರ ಮಾಡಿವೆ. ಅದು ಸಹ ಸಣ್ಣ ಮಟ್ಟದ ಕೈಗಾರಿಕೆಗಳಿಗೆ ಮಾತ್ರ. ಏಕ ಗವಾಕ್ಷಿ ಅನುಮೋದನೆ ಅಥವಾ ಬದಲಾವಣೆ, ಕಟ್ಟಡ ಯೋಜನೆಗಳಿಗೆ ಅನುಮತಿಯನ್ನು ವೇಗವಾಗಿ ನೀಡಬೇಕಾಗಿದ್ದು ಈ ತಿದ್ದುಪಡಿಯು ಅದಕ್ಕೆ ಸಹಾಯ ಮಾಡಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

SCROLL FOR NEXT