ರಾಜ್ಯ

ಚಿಂತೆ ಬೇಡ.. ಎರಡು ವಾರ್ಡ್‌ಗಳಿಗೆ ಒಂದು ಆಂಬುಲೆನ್ಸ್‌ ಲಭ್ಯ: ಆರ್ ಅಶೋಕ್

Srinivasamurthy VN

ಬೆಂಗಳೂರು: ಬೆಂಗಳೂರಿಗರು ಚಿಂತಿಸುವ ಅಗತ್ಯವಿಲ್ಲ.. ಪ್ರತೀ ಎರಡು ವಾರ್ಡ್ ಗಳಿಗೆ ಒಂದೊಂದು ಆ್ಯಂಬುಲೆನ್ಸ್ ಗಳನ್ನು ಮೀಸಲಿಡಲಾಗಿದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ದಿನಕಳೆದಂತೆ ಕೊರೋನಾ ಆರ್ಭಟ ಜೋರಾಗಿದ್ದು, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಗದೇ ರೋಗಿಗಳು ಪರದಾಡುತ್ತಿರುವ ಸುದ್ದಿಗಳ ನಡುವೆಯೇ ಕಂದಾಯ ಸಚಿವ ಆರ್ ಆಶೋಕ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. 'ಕೋವಿಡ್‌ ದೃಢಪಟ್ಟ ರೋಗಿಗಳು ಕಾಯುವ ಸ್ಥಿತಿ ಬರಬಾರದು. ತಪಾಸಣಾ ವರದಿ ಬಂದ 6–8 ಗಂಟೆ ಒಳಗೆ ಚಿಕಿತ್ಸಾ ಕೇಂದ್ರಕ್ಕೆ ತಲುಪಿಸಲು ಅಗತ್ಯವಾದ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ರೋಗ ಲಕ್ಷಣ ಕಡಿಮೆ ಇರುವವರಿಗೆ ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗಳಲ್ಲಿ ಹಾಗೂ ರೋಗ ಲಕ್ಷಣ ಇಲ್ಲದವರಿಗೆ ಖಾಸಗಿ ಹೋಟೆಲ್‌ಗಳು ಮತ್ತು ಹಜ್ ಭವನದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುವುದು' ಎಂದು ಹೇಳಿದರು.

ಅಂತೆಯೇ 'ಸೋಂಕು ದೃಢಪಟ್ಟರೆ ಅಂಥಹವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸದ್ಯ 100 ಆಂಬುಲೆನ್ಸ್‌ಗಳು ಲಭ್ಯವಿವೆ. ಎರಡು ವಾರ್ಡ್‌ಗಳಿಗೆ ಒಂದು ಆಂಬುಲೆನ್ಸ್‌ ಸಿಗುವಂತೆ ವ್ಯವಸ್ಥೆ ಮಾಡಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಆಂಬುಲೆನ್ಸ್‌ಗಳನ್ನು ಈ ಉದ್ದೇಶಕ್ಕೆ ಬಳಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಕೋವಿಡ್-19 ಚಿಕಿತ್ಸಾ ವ್ಯವಸ್ಥೆ ಕುರಿತಂತೆ ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರಮುಖರ ಸಭೆ ಕರೆಯಲು ಮುಖ್ಯಮಂತ್ರಿ  ಸೂಚನೆ ನೀಡಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ 10 ಸಾವಿರ ಹಾಸಿಗೆಗಳಿವೆ. ಅವುಗಳಲ್ಲಿ 5 ಸಾವಿರ ಹಾಸಿಗೆಗಳನ್ನು ತೆಗೆದುಕೊಳ್ಳಲು ಉದ್ದೇಶಿಸಿದ್ದೇವೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಈಗಾಗಲೇ ಸೂಚನೆ ಹೋಗಿದೆ. ಅವರ ಜೊತೆ ಮಾತನಾಡಿ ದರ ನಿಗದಿಪಡಿಸುತ್ತೇವೆ ಎಂದು ಅಶೋಕ್ ಸ್ಪಷ್ಟಪಡಿಸಿದರು.

SCROLL FOR NEXT