ರಾಜ್ಯ

ನಗರದ ಪೌರಕಾರ್ಮಿಕರಿಗೂ ತಗುಲಿದೆ ಕೊರೋನಾ ಸೋಂಕು: ಎಲ್ಲರ ತಪಾಸಣೆಗೆ ಒತ್ತಾಯ

Srinivasamurthy VN

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಈಗ ನಗರದ ಸ್ವಚ್ಛತೆಯ ಹೊಣೆ ಹೊತ್ತಿರುವ ಪೌರಕಾರ್ಮಿಕರಿಗೂ ಸೋಂಕು ತಗುಲಿದೆ.

ನಗರದ ದೀಪಾಂಜಲಿ ನಗರದಲ್ಲಿ ಕೆಲಸ ಮಾಡುವ 23 ಪೌರ ಕಾರ್ಮಿಕರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಜೂ. 21ರಂದು ಜೆ.ಜೆ. ನಗರದ 54 ವರ್ಷದ ಪೌರ ಕಾರ್ಮಿಕನೊಬ್ಬ ಕೋವಿಡ್‌ನಿಂದ ಮೃತಪಟ್ಟ ಬಳಿಕ ಪಾದರಾಯನಪುರ, ಜೆ.ಜೆ.ನಗರ, ವಿಜಯ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳ 80 ಜನ ಪೌರ ಕಾರ್ಮಿಕರ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಲ್ಲಿ 23 ಜನರಿಗೆ ಕೊರೊನಾ ಸೋಂಕು ಇರುವುದು ಖಚಿತಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಪಾದರಾಯನಪುರದಲ್ಲಿ ತ್ಯಾಜ್ಯ ಸಂಗ್ರಹಿಸಿದ್ದ 6 ಮಂದಿಗೆ ಸೋಂಕು ತಗುಲಿದೆ ಎಂದು ಮಾಹಿತಿ ಇದೆ. ಸೋಂಕಿರುವ ಪೌರ ಕಾರ್ಮಿಕರನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗುತ್ತಿದೆ. ಇವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಕುಟುಂಬ ಸದಸ್ಯರು, ಸಂಬಂಧಿಕರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ. ಅಂತೆಯೇ ನ್ಯಾಷನಲ್ ಕಾಲೇಜ್ ಗ್ರೌಂಡ್‍ನಲ್ಲಿ ಕೆಲಸ ಮಾಡುತ್ತಿದ್ದ 19 ಜನ ಪೌರಕಾರ್ಮಿಕರಲ್ಲಿ 7 ಜನ ಪಾದರಾಯನಪುರ ನಿವಾಸಿಗಳು ಅಂತ ಹೇಳಲಾಗುತ್ತಿದೆ. ಸೋಂಕಿತ ಪಾದರಾಯನಪುರದ ನಿವಾಸಿಗಳನ್ನ ಹಜ್ ಭವನಕ್ಕೆ ಶಿಷ್ಟ್ ಮಾಡಲಾಗಿದೆ. ಉಳಿದ 12 ಜನರ ನಿವಾಸಗಳ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಎಲ್ಲರನ್ನೂ ಪರೀಕ್ಷೆ ಮಾಡಲಿ
ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ ಪೌರ ಕಾರ್ಮಿಕರಲ್ಲಿ ಶೇ 25ರಷ್ಟು ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎಲ್ಲ ಪೌರಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ (ಮೈಸೂರು) ಸರ್ಕಾರವನ್ನು ಆಗ್ರಹಿಸಿದ್ದಾರೆ. ಸೋಂಕಿನಿಂದ ಅನಾರೋಗ್ಯಕ್ಕೆ ಒಳಗಾಗಿರುವ ಪೌರ ಕಾರ್ಮಿಕರಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಎಲ್ಲರಿಗೂ ಮುಖಗವಸು ಮತ್ತು ಕೈ ಗವಸು ಸೇರಿದಂತೆ ಪೂರಕ ಪರಿಕರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ಒನ್ ಅಧಿಕಾರಿಗೂ ಸೋಂಕು
ಬಸವನಗುಡಿಯ ಬೆಂಗಳೂರು ಒನ್‍ನಲ್ಲಿ ಕೆಲಸ ಮಾಡ್ತಿದ್ದ ಅಧಿಕಾರಿ ಬಿಬಿಎಂಪಿಯ ರೆವಿನ್ಯೂ ಇನ್ಸ್ ಪೆಕ್ಟರ್‍ಗೆ ಕೊರೋನಾ ಪಾಸಿಟಿವ್ ಬಂದಿದೆ. ಬೆಂಗಳೂರು ಒನ್‍ಗೆ ಭೇಟಿ ಕೊಟ್ಟವರಿಗೆ ಢವ ಢವ ಶುರುವಾಗಿದೆ.

ನಿನ್ನೆ ಬಿಡಿಗಡೆ ಮಾಡಿದ ಹೆಲ್ತ್ ಬುಲೆಟಿನಲ್ಲಿ 445 ಮಂದಿಗೆ ಸೋಂಕು ದೃಢವಾಗಿದ್ದು, 10 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು 144 ಮಂದಿಗೆ ಸೋಂಕು ಬಂದಿದೆ. ರಾಜ್ಯದಲ್ಲಿ ಒಟ್ಟು 11,005ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 246 ಮಂದಿ ಬಿಡುಗಡೆಯಾಗಿದ್ದಾರೆ. 445 ಮಂದಿಯಲ್ಲಿ 65 ಅಂತರಾಜ್ಯ ಪ್ರಯಾಣಿಕರಿದ್ದರೆ, 21 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ. ಐಸಿಯುನಲ್ಲಿರುವ ರೋಗಿಗಳ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.

SCROLL FOR NEXT