ರಾಜ್ಯ

ನಾಡಹಬ್ಬ 'ದಸರಾ' ಆಚರಣೆ ಮೇಲೂ ಕೊರೋನಾ ಕರಿ ನೆರಳು!

Manjula VN

ಬೆಂಗಳೂರು: ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಮೇಲೂ ಕೊರೋನಾ ವೈರಸ್ ಕರಿ ಛಾಯೆ ಬಿದ್ದಿದ್ದು, ಈ ಬಾರಿ ಮೈಸೂರು ದಸರಾ ಒಡಿಶಾದಲ್ಲಿ ನಡೆದ ಪೂರಿ ಜಗನ್ನಾಥ ರಥಯಾತ್ರೆಯಂತೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಹಬ್ಬ ಹಾಗೂ ಸಂಪ್ರದಾಯಗಳನ್ನು ಮುಂದುವರೆಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಚರ್ಚೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಸೋಂಕು ಪೀಡಿತರ ಸಂಕ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುವುದು ಕಷ್ಟಸಾಧ್ಯ. ಹೀಗಾಗಿ ಪೂರಿ ರಥಯಾತ್ರೆಯಂತೆಯೇ ದಸಾರವನ್ನು ಆಚರಿಸುವ ಕುರಿತು ಚಿಂತನೆ ನಡೆಸುತ್ತಿದ್ದೇವೆಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಯವರು ಹೇಳಿದ್ದಾರೆ. 

ಈ ಕುರಿತು ಉನ್ನತ ಮಟ್ಟದ ತಂಡವೊಂದರನ್ನು ರಚನೆ ಮಾಡಲಾಗಿದ್ದು, ಕಾರ್ಯಕ್ರಮವನ್ನು ನೇರಪ್ರಸಾರ ಮಾಡುವುದು ಹಾಗೂ ಇನ್ನಿತರೆ ನಿರ್ಧಾರಗಳ ಕುರಿತು ಅಧಿಕಾರಿಗಳ ನಿರ್ಧರಿಸಲಿದ್ದಾರೆಂದು ತಿಳಿಸಿದ್ದಾರೆ. 

ಇನ್ನು ದಸರಾ ಹಬ್ಬ ಆಚರಣೆ ವೇಳೆ ಪಾಲ್ಗೊಳ್ಳುವ ಆನೆಗಳ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆಂದಿದ್ದಾರೆ. 

ಮೈಸೂರು ಉಪ ಆಯುಕ್ತ ಅಭಿರಾಮ್ ಜಿ.ಶಂಕರ್ ಅವರು ಮಾತನಾಡಿ, ಎಲ್ಲಾ ಆಯಾಮಗಳಲ್ಲೂ ಚಿಂತನೆ ನಡೆಸಿ ಈ ಬಾರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಕೊರೋನಾ ವೈರಸ್ ಕುರಿತಂತೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಂತಿಮ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 

ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರವಾಸಿಗರಿಗಾಗಿ ಕರ್ನಾಟಕದ ಎಲ್ಲಾ ಪುರಾತತ್ತ್ವ ಶಾಸ್ತ್ರದ ಮಹತ್ವದ ತಾಣಗಳು ಮತ್ತು ಜನಪ್ರಿಯ ತಾಣಗಳ ವರ್ಚುವಲ್ 360 ಡಿಗ್ರಿ ದೃಶ್ಯ ಪ್ರವಾಸಗಳನ್ನು ಕೈಗೊಳ್ಳುವತ್ತ ಕಾರ್ಯನಿರ್ವಹಿಸುತ್ತಿದೆ. ಮೈಸೂರು ದಸರಾ ಪ್ರಮುಖ ಕಾರ್ಯಕ್ರಮವಾಗಿದೆ. ಹಂಪಿ, ಬಾದಾಮಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳ ವರ್ಚುವಲ್ ಟೂರ್ ವಿಡಿಯೋಗಳನ್ನು ರಚಿಸುವ ಕುರಿತು ಪ್ರವಾಸೋದ್ಯಮ ಸಚಿವರು ಗುರುವಾರ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಕುರಿತು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದಿದ್ದಾರೆ. 

SCROLL FOR NEXT