ರಾಜ್ಯ

ಧಾರವಾಡ: ಅನೈತಿಕ ಸಂಬಂಧ ಉಳಿಸಿಕೊಳ್ಳಲು ಹೆತ್ತ ಮಗನನ್ನೇ ಕೊಂದ ತಾಯಿ!

Raghavendra Adiga

ಧಾರವಾಡ: ಅವನಿಗಿನ್ನೂ 28 ವರ್ಷ, ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಅವನು ಬೇರೆ ಜಾತಿಯ ಯುವತಿಯೊಬ್ಬಳ ಪ್ರೀತಿಸಿ ಮದುವೆಯಾಗಿರುತ್ತಾನೆ. ಆದರೆ ಅವರ ಸುಖ ಸಂಸಾರಕ್ಕೆ  ಅವನ ತಾಯಿಯೇ ಮುಳ್ಳಾಗುತ್ತಾಳೆ, ಮಾತ್ರವಲ್ಲ ಅವನ ಜೀವವನ್ನೂ ಬಲಿ ಪಡೆಯುತ್ತಾಳೆ! ಇದು ಯಾವುದೋ ಸಿನಿಮಾ ಕಥೆಯಲ್ಲ ಬದಲಿಗೆ ವಿದ್ಯಾನಗರಿ ಎಂದು ಖ್ಯಾತವಾಗಿರುವ ಧಾರವಾಡದಲ್ಲಿ ಸಂಭವಿಸಿದ ನೈಜ ಘಟನೆ. ಸಧ್ಯ ಪ್ರಕರಣ ಬೇಧಿಸಿರುವ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.  

ಧಾರವಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಹನುಮಂತಗೌಡ ಪಾಟೀಲ್ ಕೊಲೆಯಾಗಿದ್ದು ಆರೋಪಿ ಮೃತನ ತಾಯಿ‌ ಸುನಂದಾ ಸೋಮನಗೌಡ ಪಾಟೀಲ್ (45) ಎನ್ನುವುದು ಭೀಕರ ಸತ್ಯ. 

ಸುನಂದಾ ಪತಿ ಆರು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು ಅಲ್ಲಿಂದೀಚೆಗೆ ಆಕೆ ಮಹಾದೇವಪ್ಪ ಗಾಯಕವಾಡ (50) ಎಂಬಾತನೊಡನೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು.

ಈ ವಿಚಾರವಾಗಿ ತಾಯಿ-ಮಗನ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಮೃತ ಹನುಮಂತ ಮನೆಯನ್ನು ಭಾಗ ಮಾಡಲು ಕೇಳಿ ತಾನು ಪ್ರತ್ಯೇಕವಾಗಿ ಸಂಸಾರ ಮಾಡುವುದಾಗಿ ಹೇಳಿದಾಗ ತಾಯಿ ಹಾಗೂ ಆತನ ಸೋದರ ಅದಕ್ಕೆ ವಿರೋಧಿಸುತ್ತಾರೆ. ಬಳಿಕ ಹನುಮಂತ ಊರ ಜನರೆದುರು ಪಂಚಾಯಿತಿ ಸೇರಿಸಿ ಮನೆ ಭಾಗ ಮಾಡಿಕೊಂಡಿರುತ್ತಾನೆ. ಆದರೆ ಹೀಗೆ ಮನೆಯನ್ನು ಒಡೆದ ಹನುಮಂತನ ಮೇಲೆ ತಾಯಿ ಸುನಂದ, ಸೋದರ ಹಾಗೂ ಮಹದೇವಪ್ಪನಿಗೆ ಕಣ್ಣಿರುತ್ತದೆ. 

ಬುಧವಾರ ರಾತ್ರಿ ಸಹ ಈ ವಿಚಾರವಾಗಿ ಜಗಳ ನಡೆದಿದೆ. ಆಗ ಸೋದರ ಭೀಮನಗೌಡ ಅಣ್ಣನ ಮೇಲೆ ಖಾರದ ಪುಡಿ ಎರಚುತ್ತಾನೆ. ಕಣ್ಣಿಗೆ ಖಾರದ ಪುಡಿ ಬಿದ್ದು ಹನುಮಂತ ಕೆಳಗೆ ಬೀಳುತ್ತಿದ್ದಂತೆ ಅವನ ಕೈ ಕಾಲು ಕಟ್ಟಿ ದೊಣ್ಣೆಯಿಂದ ಥಳಿಸಿ ಕೊಲ್ಲುತ್ತಾರೆ. ಶವವನ್ನು ಮನೆ ಮುಂಡೆ ಎಸೆದ ಮೂವರೂ ರಾತ್ರೋರಾತ್ರಿ ಊರು ಬಿಟ್ಟು ಪರಾರಿಯಾಗಿದ್ದಾರೆ.

ಬೆಳಿಗ್ಗೆ ಮನೆ ಮುಂದೆ ಶವವಿದ್ದದ್ದನ್ನು ಕಂಡ ಗ್ರಾಮಸ್ಥರು ಪೋಲೀಸರಿಗೆ ವರದಿಮಾಡುತ್ತಾರೆ. ತಕ್ಷಣ ಕಾರ್ಯಪ್ರವೃಉತ್ತರಾದ ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಧಾರವಾಡ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT