ರಾಜ್ಯ

ಇನ್ನೂ ಮೂರು ವರ್ಷಗಳಲ್ಲಿ ಪ್ರತಿ ಮನೆ ಮನೆಗೂ ಕುಡಿಯುವ ನೀರು: ಈಶ್ವರಪ್ಪ

Shilpa D

ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಪ್ರತಿಯೊಂದು ಮನೆಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ ಮಿಷನ್ ಅನುಷ್ಠಾನ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸುಮಾರು 90 ಲಕ್ಷ ಮನೆಗಳಿದ್ದು ಅವುಗಳಲ್ಲಿ  ಕೇವಲ 25 ಲಕ್ಷ ಮನೆಗಳ ಬಾಗಿಲಿಗೆ ಮಾತ್ರ ನೀರು ತಲುಪುತ್ತಿದೆ ಎಂದು ಹೇಳಿದರು.

ಉಳಿದ 65 ಲಕ್ಷ ಮನೆಗಳಿಗೆ ಜಲಜೀವನ ಮಿಷನ್ ಅಡಿ ಮನೆ ಬಾಗಿಲಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಆಗಸ್ಟ್ 2ರಂದು ಈ ಯೋಜನೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗುವುದು. ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹುಟ್ಟಹಬ್ಬದ ಪ್ರಯುಕ್ತ ಈ ಯೋಜನೆಯನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಲಿದ್ದೇವೆ ಎಂದು ಹೇಳಿದರು. 

ರಾಜ್ಯದಲ್ಲಿ ಈ ಯೋಜನೆಯನ್ನು ಮೂರು ವರ್ಷದೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ನಾಲ್ಕು ವರ್ಷ ಸಮಯ ತೆಗೆದುಕೊಂಡಿದ್ದರೆ ನಮ್ಮಲ್ಲಿ ಮೂರು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಈ ಯೋಜನೆಗೆ ಪ್ರತಿ ವರ್ಷ 4 ಸಾವಿರ ಕೋಟಿ ಹಾಗೂ ರಾಜ್ಯ ಸರ್ಕಾರ 4 ಸಾವಿರ ಕೋಟಿ ಸೇರಿದಂತೆ ಒಟ್ಟು ಒಂದು ವರ್ಷಕ್ಕೆ 8 ಸಾವಿರ ಕೋಟಿ ಖರ್ಚಾಗಲಿದೆ ಎಂದು ವಿವರಿಸಿದರು.

SCROLL FOR NEXT