ರಾಜ್ಯ

ಶಾಲೆಗಳ ಮರು ಆರಂಭ ಕುರಿತು ಜುಲೈ 5ರ ನಂತರ ನಿರ್ಧಾರ: ಶಿಕ್ಷಣ ಸಚಿವ ಸುರೇಶ್ ಕುಮಾರ್

Sumana Upadhyaya

ಚಿಕ್ಕಬಳ್ಳಾಪುರ: ಕೊರೋನಾ ಆತಂಕದ ನಡುವೆ ಶಾಲೆ ಪುನರಾರಂಭ ಕುರಿತು ಜುಲೈ 5ರ ನಂತರ ತೀರ್ಮಾನ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಆಗಸ್ಟ್, ಸೆಪ್ಟೆಂಬರ್ ನಂತರವಷ್ಟೇ ಶಾಲೆ ಆರಂಭಿಸಿ ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ತಜ್ಞರು, ಪೋಷಕರೊಂದಿಗೆ ಚರ್ಚಿಸಿ ತೀರ್ಮಾನ ಮಾಡಬೇಕಾಗಿದೆ ಎಂದರು.

ಎಲ್ ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳಿರುವುದಿಲ್ಲ. ವಾರಕ್ಕೆ ಎರಡು ಬಾರಿ ಶಾಲೆಗಳ ಶಿಕ್ಷಕರು ಮಕ್ಕಳೊಂದಿಗೆ ದೂರವಾಣಿ ಮೂಲಕ ಸಂವಹನ ನಡೆಸುತ್ತಿರಬೇಕು ಎಂದು ಸೂಚಿಸಿದ್ದೇವೆ ಎಂದರು. 

1ನೇ ತರಗತಿಯಿಂದ 10ನೇ ತರಗತಿಯವರೆಗೆ ಯಾವ ರೀತಿ ಪಾಠಗಳನ್ನು ನಡೆಸಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಾರ್ಗಸೂಚಿ ಆಧಾರದ ಮೇಲೆ ಮತ್ತು ಈ ಹಿಂದೆ ಕೈಗೊಂಡ ನಿರ್ಧಾರಗಳ ಮೇಲೆ ನಾವು ತಜ್ಞರ ಸಮಿತಿಯನ್ನು ರಚಿಸಿದ್ದೇವೆ. ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.

SCROLL FOR NEXT