ರಾಜ್ಯ

ಉನ್ನತ ಶಿಕ್ಷಣ ಡಿಜಿಟಲೀಕರಣ, ಜು. 15ರಿಂದ ವಿವಿಗಳಲ್ಲಿ ಇ-ಅಫೀಸ್ ಮೂಲಕ ಕಡತ ರವಾನೆ: ಡಿಸಿಎಂ

Lingaraj Badiger

ಬೆಂಗಳೂರು: ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು, ಸಂಪೂರ್ಣ ಡಿಜಿಟಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿದ್ದು, ಜುಲೈ ೧೫ ರಿಂದ ಎಲ್ಲ ವಿಶ್ವವಿದ್ಯಾಲಯಗಳು ಸರ್ಕಾರದ ಜತೆ ಇ-ಆಫೀಸ್ (ಆನ್ಲೈನ್) ಮೂಲಕವೇ ವ್ಯವಹರಿಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಆದೇಶಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ, ಎನ್ಐಸಿ ಸಹಯೋಗದಲ್ಲಿ ರೂಪಿಸಿರುವ ಶಿಕ್ಷಣ ಸಂಸ್ಥೆಗಳ ಆನ್ಲೈನ್ ಸಂಯೋಜನೆ ಪೋರ್ಟಲ್ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇ-ಅಫೀಸ್ ಯಶಸ್ವಿಯಾಗಿದ್ದು, ಅದರ ಮೂಲಕವೇ ಕಡತಗಳು ರವಾನೆ ಆಗಬೇಕು. ಎಲ್ಲಿ ಯಾವ ಕಡತ ಇದೆ? ವಿಲೇವಾರಿ ವಿಳಂಬವಾಗಲು ಕಾರಣ ಏನು ಎನ್ನುವುದನ್ನು ತಿಳಿಯಬಹುದು. ಅನಗತ್ಯವಾಗಿ ಕಡತಗಳನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಗೆ ತಿಲಾಂಜಲಿ ಇಡಬಹುದು ಎಂದು ಅವರು ಹೇಳಿದರು.

ಯಾವುದೇ ಕಾಲೇಜು ಅಥವಾ ಕೋರ್ಸ್ ಗಳಿಗೆ ಮಾನ್ಯತೆ ನೀಡಬೇಕಾದರೂ ಆದಕ್ಕೆ ಸಂಬಂಧಿಸಿದ ಕಡತ ಅಥವಾ ಪತ್ರ ವ್ಯವಹಾರಗಳು ಆನ್ಲೈನ್ ಮೂಲಕವೇ ಆಗಬೇಕು. ಇದರಿಂದ ವಿಳಂಬ ಆಗುವುದು ತಪ್ಪುವ ಜತೆಗೆ ವ್ಯವಸ್ಥೆಯಲ್ಲಿ ಸುಧಾರಣೆ ಕೂಡ ಕಾಣಬಹುದು ಎಂದು ಹೇಳಿದರು.

ಮಾನ್ಯತೆ ನೀಡುವುದಕ್ಕೂ ಮುನ್ನ ಎಲ್ಲ ರೀತಿಯ ಮಾನದಂಡಗಳನ್ನು ಸರಿಯಾಗಿ ವಿಶ್ವವಿದ್ಯಾಲಯಗಳು ಪರಿಶೀಲಿಸಿರಬೇಕು. ಸರ್ಕಾರಕ್ಕೆ ಕಳುಹಿಸುವ ಎಲ್ಲ ಪ್ರಸ್ತಾವನೆಗಳು ಕಾನೂನುಬದ್ಧವಾಗಿಯೇ ಇರಬೇಕು. ಮೂಲಸೌಲಭ್ಯ ಇರುವ ಶಿಕ್ಷಣ ಸಂಸ್ಥೆಗಳಿಗೇ ವಿಶ್ವವಿದ್ಯಾಲಯಗಳು ಮಾನ್ಯತೆ ನೀಡಬೇಕು. ಒಟ್ಟಾರೆ ಸರ್ಕಾರಕ್ಕೆ ಕಳಹಿಸುವ ಕಡತಗಳು ದೋಷರಹಿತವಾಗಿರಬೇಕು. ಒಂದು ವೇಳೆ ಲೋಪಗಳು ಕಂಡುಬಂದಲ್ಲಿ, ಅದಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕುಲಸಚಿವರನ್ನೇ ಹೊಣೆಗಾರರನ್ನಾಗಿಸುತ್ತೇನೆ ಎಂದು ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಎಚ್ಚರಿಕೆ ನೀಡಿದರು.

ಸಂಯೋಜನೆ ವಿಷಯದಲ್ಲಿ ಅಕ್ರಮಗಳಿಗೆ ಅವಕಾಶ ಇಲ್ಲ. ಮೂಲಸೌಲಭ್ಯ ಇರುವ ಸಂಸ್ಥೆಗೆ ಸಂಯೋಜನೆ ನೀಡಿದರೆ ಗುಣಮಟ್ಟದ ಶಿಕ್ಷಣ ತನ್ನಿಂತಾನೆ ಬರುತ್ತದೆ. ಈ ವಿಚಾರದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಇದುವರೆಗೂ ಸಂಯೋಜನೆ ಹೆಸರಲ್ಲಿ ಬರೀ ಕಾಲಹರಣವಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರಲ್ಲದೆ, ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತಿತ್ತು. ಹೊಸ ವ್ಯವಸ್ಥೆಯಿಂದ ಎಲ್ಲವೂ ಪಾರದರ್ಶಕವಾಗಲಿದೆ. ಶಿಕ್ಷಕರ ಸಂಖ್ಯೆ, ಅವರ ಕಾರ್ಯದಕ್ಷತೆ, ವಿದ್ಯಾರ್ಥಿಗಳ ಪ್ರಮಾಣ, ಸೌಲಭ್ಯಗಳು ಸೇರಿ ಎಲ್ಲ ವಿಷಯಗಳ ಬಗ್ಗೆ ಪರಿಪೂರ್ಣ ಮಾಹಿತಿ ಸರ್ಕಾರಕ್ಕೆ ಇರುತ್ತದೆ ಎಂದು ಹೇಳಿದರು.

ಏನಿದು ಆನ್ಲೈನ್ ಸಂಯೋಜನೆ?
* ಇದುವರೆಗೂ ವಿವಿಗಳು ಮತ್ತು ಸರಕಾರದ ನಡುವೆ ಎಲ್ಲ ವ್ಯವಹಾರಗಳು ಕಡತ, ಟಪಾಲು ಇಲ್ಲವೇ ಪತ್ರ ಮುಕೇನ ನಡೆಯುತ್ತಿದ್ದವು. ಇನ್ನು ಮುಂದೆ ಇವೆಲ್ಲವೂ ಆನ್ಲೈನ್ ವ್ಯವಸ್ಥೆಯ ಮೂಲಕವೇ ನಡೆಯಲಿವೆ.
* ಮ್ಯೂನುವಲ್ ಮಾಡುತ್ತಿದ್ದ ಪ್ರಕ್ರಿಯೆಯಲ್ಲಿ ಬಹಳಷ್ಟು ಲೋಪಗಳ ಜತೆಗೆ ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದ್ದವು. ಇದೆಲ್ಲವನ್ನೂ ಆನ್ಲೈನ್ ಸಂಯೋಜನೆ ನಿವಾರಿಸಲಿದೆ.
* ಇದನ್ನು “ವಿಶ್ವವಿದ್ಯಾಲಯ ನಿರ್ವಹಣಾ ವ್ಯವಸ್ಥೆ” ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆ ತುಂಬಾ ಆಧುನಿಕವಾಗಿದೆ. ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್.ಐ.ಸಿ) ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಏಕಗವಾಕ್ಷಿ ವ್ಯವಸ್ಥೆಯಂತೆ ಕೆಲಸ ಮಾಡುತ್ತದೆ.
* ವಿವಿಗಳು ಹೊಸ ಕಾಲೇಜುಗಳಿಗೆ ಅನುಮತಿ, ಕೋರ್ಸುಗಳಿಗೆ ಒಪ್ಪಿಗೆಯೂ ಸೇರಿದಂತೆ ಮಾನ್ಯತೆ ನೀಡುವ ಹಾಗೂ ಆಡಳಿತಾತ್ಮಕ ವಿಚಾರಗಳನ್ನು ಇದರ ಮೂಲಕವೇ ಮಾಡಬೇಕು.
* ಈ ವ್ಯವಸ್ಥೆಯಿಂದ ವಿವಿ ಮತ್ತು ಕಾಲೇಜುಗಳ ನಡುವಿನ ವ್ಯವಹಾರ ಸುಲಭ, ಸರಳವಾಗಿರುತ್ತದೆ.
ಆನ್ಲೈನ್ ಸಂಯೋಜನೆ ಉದ್ದೇಶ: 
* ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ
* ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಸುಧಾರಣೆ 
* ಆಡಳಿತಕ್ಕೆ ತ್ವರಿತ ನಿರ್ಧಾರ ಬೆಂಬಲದ ವ್ಯವಸ್ಥೆ 
* ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಸ್ತುತ ತಂತ್ರಜ್ಞಾನ ಹಾರ್ಡ್ ವೇರ್, ಸಾಫ್ಟ್ ವೇರ್ ಮತ್ತು ನೆಟ್ವರ್ಕ್ ಮೂಲಸೌಕರ್ಯಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹ 
* ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಸಂಸ್ಥೆಗಳ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಫಲಿತಾಂಶಗಳ ಬಗ್ಗೆ ಮಾಹಿತಿ ಸಂಗ್ರಹ ಸುಲಭ

SCROLL FOR NEXT