ರಾಜ್ಯ

ತುಮಕೂರು: ಕುರಿಗಾಹಿಗೆ ಕೊರೋನಾ, 50ಕ್ಕೂ ಹೆಚ್ಚು ಕುರಿಗಳ ಗಂಟಲು ದ್ರವ ಸಂಗ್ರಹಿಸಿದ ಅಧಿಕಾರಿಗಳು

Lingaraj Badiger

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತ ಮೇಯಿಸುತ್ತಿದ್ದ 50ಕ್ಕೂ ಹೆಚ್ಚು ಕುರಿ ಹಾಗೂ ಮೇಕೆಗಳನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದ ಕುರಿ ಮೇಯಿಸುತ್ತಿದ್ದ ವ್ಯಕ್ತಿಗೆ ಕೊರೋನಾ ದೃಢಪಟ್ಟಿದೆ. ಹಾಗಾಗಿ ಆತನ 50 ಕುರಿಗಳನ್ನು ಪ್ರತ್ಯೇಕವಾಗಿರಿಸಿ ಅವುಗಳ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದನ್ನು ಮಧ್ಯ ಪ್ರದೇಶದ ಭೂಪಾಲ್ ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿ ತಪಾಸಣೆ ಮಾಡಿಸಲು ನಿರ್ಧರಿಸಲಾಗಿದೆ.

ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಕೆ ಜಿ ನಂದೀಶ್ ನೇತೃತ್ವದಲ್ಲಿ ತಜ್ಞರಾದ ಡಾ.ಪ್ರವೀಣ್ ಮತ್ತು ಮಂಜುನಾಥ್ ಅವರು ಪಿಪಿಇ ಕಿಟ್ ಧರಿಸಿ ಕುರಿಗಳ ಗಂಟಲು ದ್ರವ ಸಂಗ್ರಹಿಸಿದರು.

10ರಿಂದ 15 ದಿನಗಳಲ್ಲಿ ಕುರಿಗಳ ಕೊವಿಡ್-19 ವರದಿ ಬರಲಿದ್ದು, ಅಲ್ಲಿಯವರಿಗೆ ಈ ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಇಲ್ಲಿಯವರೆಗೂ ಕೊರೋನಾ ಕುರಿಯ ಮೂಲಕ ಮನುಷ್ಯರಿಗೆ ಹರಡಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೂ ಕೊರೋನಾ ವಿಭಿನ್ನ ಸ್ವರೂಪದಲ್ಲಿರುವುದರಿಂದ ಕುರಿಗಳ ದ್ರವವನ್ನು ತೆಗೆದು ಪರೀಕ್ಷಿಸಲು ಸೂಚಿಸಲಾಗಿದೆ ಎಂದು ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಕಂಟೈನ್ಮೆಂಟ್‌ ವಲಯದಲ್ಲಿರುವ ಪ್ರತಿಯೊಬ್ಬರಿಗೂ ಕೋವಿಡ್‌ ತಪಾಸಣೆ ನಡೆಸಬೇಕು. ಜಿಲ್ಲೆಯಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೋಂಕು ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಜಿಲ್ಲೆಯಲ್ಲಿ ಮನೆಮನೆಗೆ ತೆರಳಿ ಆರೋಗ್ಯ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

SCROLL FOR NEXT