ರಾಜ್ಯ

ಕಡು ಬಡತನದಲ್ಲೂ ಓದಿ 15 ಚಿನ್ನದ ಪದಕ ಪಡೆದ ಚಾಮರಾಜನಗರದ ಸಂತೆಮರಳ್ಳಿ ಗ್ರಾಮದ ಸುಷ್ಮಾ

Srinivasamurthy VN

ಚಾಮರಾಜನಗರ: ಇದು ಬಡತನದಲ್ಲೂ ಚಿನ್ನ ಬೆಳೆದ ಕಥೆ. ಇರುವುದು 3 ಎಕರೆ ಭೂಮಿ. ಆಸರೆಯಾಗಿದ್ದ ಕೊಳವೆ ಬಾವಿಯೂ ಕೈಕೊಟ್ಟ ಪ್ರಸಂಗ. ದೃತಿಗೆಡದೆ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿರುವ ರೈತ ದಂಪತಿ. ಆ ದಂಪತಿಯ ಕಷ್ಟ-ಸುಃಖ-ನೋವು ನೋಡುತ್ತಲೇ ಬೆಳೆದ ಪುತ್ರಿ, ಇದೀಗ ಜ್ಞಾನ ದೇಗುಲದ ಅಂಗಳದಲ್ಲಿ ಚಿನ್ನ ಬೆಳೆದಿದ್ದಾಳೆ. ಅದು ಬರೋಬ್ಬರಿ 15 ಚಿನ್ನದ ಪದಕ ಪಡೆದು ರಾಜ್ಯದ ಗಮನ ಸೆಳೆದಿದ್ದಾಳೆ.

ಹೌದು, ಸದ್ಯ ದೆಹಲಿಯ ಭಾರತೀಯ ಕೃಷಿ ಅನುಸಂಧಾನದಲ್ಲಿ ಬೀಜಶಾಸ್ತ್ರದಲ್ಲಿ ಎಂಎಸ್ಸಿ ಮಾಡುತ್ತಿರುವ ಸುಷ್ಮಾ ಎಂ.ಕೆ ಎಂಬ ರೈತ ದಂಪತಿಯ ಪುತ್ರಿ ಬಿಎಸ್ಸಿಯಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮೊದಲ ಶ್ರೇಣಿ ಪಡೆದು 15 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾಳೆ. ಮಗಳು 15 ಚಿನ್ನದ ಪದಕ ಕೊರಳಿಗೆ ಹಾಕಿಕೊಂಡು ವೇದಿಕೆ ಇಳಿಯುತ್ತಿದ್ದರೆ ಮೂಲೆಯಲ್ಲಿ ಮೌನವಾಗಿ ನಿಂತಿದ್ದ ತಂದೆ ಕುಮಾರ, ತಾಯಿ ಚಂದ್ರಮತಿ ಅವರು ಆನಂದದ ಕಣ್ಣೀರು ಸುರಿದರು. ತಂದೆ-ತಾಯಿಯ ಕಷ್ಟ ನೋಡುತ್ತ ಹೊಲದಲ್ಲಿ ಆಗಾಗ ಕೃಷಿ ಮಾಡುತ್ತಲೇ ಬೆಳೆದ ಸುಷ್ಮಾ ಎಂ.ಕೆ, ವೇದಿಕೆಯಿಂದ ಇಳಿದ ತಕ್ಷಣವೇ ತನ್ನ ಕೊರಳಲ್ಲಿದ್ದ ಚಿನ್ನದ ಪದಕಗಳನ್ನು ತಾಯಿಯ ಕೊರಳಿಗೆ ಹಾಕಿ ಖುಷಿಪಟ್ಟಳು.

ಗೋಲ್ಡ್ ಮೆಡಲ್‌ ಬೆಡಗಿ: ತೋಟಗಾರಿಕೆ ವಿವಿ ವ್ಯಾಪ್ತಿಯ ಮೈಸೂರಿನ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ಪೂರೈಸಿದ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಗ್ರಾಮದ ಸುಷ್ಮಾ ಎಂ.ಕೆ, ಬಿಎಸ್ಸಿಯಲ್ಲಿ 9.16ರಷ್ಟು (10ಕ್ಕೆ) ಅಂಕ ಪಡೆದು ಇಡೀ ವಿವಿಗೆ ಗೋಲ್ಡ್‌ ಮೆಡಲ್‌ ಬೆಡಗಿಯಾಗಿ ಹೊರ ಹೊಮ್ಮಿದ್ದಾಳೆ. ರ್‍ಯಾಂಕ್‌ ಪಡೆದ ಈ ವಿದ್ಯಾರ್ಥಿನಿಗೆ ರಾಜ್ಯದ ತೋಟಗಾರಿಕೆ ಸಚಿವ ಎ. ನಾರಾಯಣಗೌಡ, ಕುಲಪತಿ ಡಾ|ಕೆ.ಎಂ. ಇಂದಿರೇಶ, ಕೇಂದ್ರ ಸರ್ಕಾರದ ಭಾರತೀಯ ಪರಿವರ್ತನಾ ಸಂಸ್ಥೆ (ನೀತಿ) ಆಯೋಗ ಹಾಗೂ 15ನೇ ಹಣಕಾಸು ಆಯೋಗದ ಸದಸ್ಯ ಡಾ| ರಮೇಶ ಚಂದ್‌ ಅವರು 15 ಚಿನ್ನದ ಪದಕಗಳನ್ನು ಕೊರಳಿಗೆ ಹಾಕಿ ಅಭಿನಂದಿಸಿದರು.

SCROLL FOR NEXT