ರಾಜ್ಯ

ಬೆಳಗಾವಿ: ಹೆದ್ದಾರಿಯಲ್ಲಿ ಮಾರಕಾಸ್ತ್ರ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ಐವರ ಬಂಧನ

Lingaraj Badiger

ಬೆಳಗಾವಿ: ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಗವಾನಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮಂಗಳವಾರ ರಾತ್ರಿ ಈ ಐವರು ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಒಟ್ಟು ರೂ.55,000 ಮೌಲ್ಯದ ಎರಡು ಬೈಕು, ಚಾಕುಗಳು, ನಕಲಿ ಪಿಸ್ತೂಲ್, ಬಿದಿರಿನ ಬಡಿಗೆಗಳು, ಖಾರದ ಪುಡಿ, ಹಗ್ಗ, ಟಾರ್ಚ್ ಹಾಗೂ ಮಹಾರಾಷ್ಟ್ರ ಪೊಲೀಸರ ಸಮವಸ್ತ್ರವನ್ನು ಹೋಲುವ ಖಾಕಿ ಶರ್ಟ್, ಪ್ಯಾಂಟ್, ಬೆಲ್ಟ್, ಬೂಟ್ ಮತ್ತು ನಕಲಿ ಐಡಿ ಕಾರ್ಡ್ ಜಪ್ತಿ ಮಾಡಿದ್ದಾರೆ.

ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೋಹನ ಪವಾರ, (೨೦), ಹರೀಶ ಡಾಂಗರೆ (೨೮) ಇಬ್ಬರೂ ನಿಪ್ಪಾಣಿಯವರು, ಮಧುಕರ ನಿಕ್ಕಮ್ (೪೩), ಸಂದೀಶ ಪೂಜಾರಿ (೩೩) ಮತ್ತು ಅಮರ ಬಾಗಲ (೩೫) ಮೂವರೂ ಕೊಲ್ಹಾಪುರ ಜಿಲ್ಲೆ ಕಾಗಲ ತಾಲೂಕಿನವರು ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ದರೋಡೆ ಮಾಡುವ ಉದ್ದೇಶದಿಂದ ಕೈಯಲ್ಲಿ ಮಾರಕ ಅಯುಧಗಳನ್ನು ಹಿಡಿದುಕೊಂಡು ಹೆದ್ದಾರಿ ಪಕ್ಕದಲ್ಲಿ ನಿಂತಿದ್ದರು. ಆರೋಪಿ ಮೋಹನ ಪವಾರ ಈತನು ನಕಲಿ ಮಹಾರಾಷ್ಟ್ರ ಪೊಲೀಸರ ವೇಶದಲ್ಲಿ ವಾಕಿಟಾಕಿ ಹಿಡಿದುಕೊಂಡು ರಸ್ತೆಯಲ್ಲಿ ಸಾಗುವ ವಾಹನಗಳನ್ನು ತಡೆಯುತ್ತಿದ್ದನು. ಬಳಿಕ ಆರೋಪಿಗಳೆಲ್ಲ ಸೇರಿ ಚಾಲಕನ ಹತ್ತಿರ ಇರುತ್ತಿದ್ದ ಹಣ ಮತ್ತು ಚಿನ್ನಾಭರಣಗಳನ್ನು ದೋಚುತ್ತಿದ್ದರು. ಇಂತಹ ಇನ್ನೊಂದು ಕೃತ್ಯದ ತಯಾರಿಯಲ್ಲಿರುವಾಗ ಆರೋಪಿಗಳು ನಿಪ್ಪಾಣಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಈ ಸಂಬಂಧ ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT