ರಾಜ್ಯ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಹಿಂಸಾಚಾರ ಅನಗತ್ಯ: ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ಸಂಸತ್ ನಡೆಯುವ ಕಾರ್ಯವೈಖರಿ ಮತ್ತು ಅದಕ್ಕೆ ಯಾವ ರೀತಿಯ ಬೆಲೆ ಕೊಡಬೇಕೆಂಬುದರ ಬಗ್ಗೆ ತಿಳುವಳಿಕೆ ಇರುವವರೇ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಅನಗತ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದರು. 

ಬುಧವಾರ ನಡೆದ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಎ, ಎನ್ಆರ್'ಸಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಂಸತ್ತ ಕಾರ್ಯವೈಖರಿ ಮತ್ತು ಸಂಸತ್'ಗೆ ಯಾವ ರೀತಿಯಲ್ಲಿ ಬೆಲೆ ಕೊಡಬೇಕೆಂಬುದು ಗೊತ್ತಿರುವವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ಜಾರಿ ಮಾಡಲಾಗತ್ತಿದೆ. ವಿರೋಧ ವ್ಯಕ್ತಪಡಿಸುತ್ತಿರುವುದು ಅನಗತ್ಯ ಎಂದು ಹೇಳಿದರು. 

ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕಾಗಿ ನಾನು ಎಂಬ ಭಾವನೆ ಇತ್ತು. ಆದರೆ, ದುರಾದೃಷ್ಟವಶಾತ್ ಪ್ರಸ್ತುತ ಪರಿಸ್ಥಿತಿಯು ನಮಗಾಗಿ ದೇಶ ಇದೆ ಎಂಬುದನ್ನು ಭಾವಿಸಲಾಗಿದೆ. ಪರಿಣಾಮ ಜ್ವಲಂತ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸಂವಿಧಾನದಲ್ಲಿ ತುಳಿತಕ್ಕೊಳಗಾದವರ ಏಳಿಗೆಗಾಗಿ ಹಕ್ಕು ನೀಡಲಾಗಿದೆ. ಕೇವಲ ಒಂದು ಸಮುದಾಯಕ್ಕೆ ಮಾತ್ರ ಸಂವಿಧಾನ ರಚನೆಯಾಗಿಲ್ಲ. ಪ್ರತಿ ವರ್ಗ, ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಅಂಬೇಡ್ಕರ್ ಅವರ ಶ್ರಮ ಇಲ್ಲದಿದ್ದರೆ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ. ದೈನಂದಿನ ಸಮಸ್ಯೆಗಳಿಗೂ ಸಂವಿಧಾನದಲ್ಲಿ ಉತ್ತರ ಇದೆ ಎಂದು ತಿಳಿಸಿದರು. 

ಸಂವಿಧಾನವನ್ನೇ ಬುಡಮೇಲು ಮಾಡಿ ಸರ್ಕಾರ ರಚನೆ ಮಾಡಿರುವ ಉದಾಹರಣೆಗಳೂ ಹಲವು ದೇಶದಲ್ಲಿ ನಡೆದಿದೆ. ಆದರೆ, ಉತ್ಕಷ್ಟ ಸಂವಿಧಾನ ರಾಷ್ಟ್ರಕ್ಕೆ ನೀಡಲಾಗಿದೆ. ದೇಶವು ಆಂತರಿಕ ಸಂಕಷ್ಟಕ್ಕೊಳಗಾದರೆ ಸಂವಿಧಾನದಲ್ಲಿ ಅದಕ್ಕೆ ಪರಿಹಾರ ಇದೆ ಎಂದು ವಿವರಿಸಿದರು. 

SCROLL FOR NEXT