ರಾಜ್ಯ

ಗೃಹ ಸಚಿವರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ ತನ್ವೀರ್ ಸೇಠ್

Shilpa D

ಬೆಂಗಳೂರು: ತನ್ನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾಜಿ ಸಚಿವ ತನ್ವೀರ್ ಸೇಠ್​ ಬಿಜೆಪಿ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. 

ಗೃಹ ಸಚಿವ ಬಸವರಾಜ​ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಈ ಹಲ್ಲೆ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ನನಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಅವರ ಮೇಲೆ ನಡೆದ ಹಲ್ಲೆ ವಿಚಾರವಾಗಿ ಗೃಹ ಸಚಿವರಿಗೆ ಪತ್ರ ಬರೆದ ತನ್ವೀರ್ ಸೇಠ್, ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನ ಮಾತ್ರ ಪೊಲೀಸರು ಬಂಧಿಸಿದ್ದಾರೆ. 

ಆದರೆ ಈ ಪ್ರಕರಣದ ಹಿಂದೆ ಯಾರು ಇದ್ದಾರೆ ಅನ್ನೋದು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

ಕಳೆದ ವರ್ಷದ ನವೆಂಬರ್ 18ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ನೂರಾರು ಜನರ ಮುಂದೆಯೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು. ಘಟನೆಯಲ್ಲಿ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದು ತನ್ವೀರ್ ಸೇಠ್ ಜೀವನ್ಮರಣ ಹೋರಾಟ ಆರಂಭಿಸಿದ್ದರು.

ಹಲ್ಲೆಯ ನಂತರ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಲಾಗಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾದ ನಂತರ ದುಬೈನಲ್ಲೇ ಅವರು ವಿಶ್ರಾಂತಿ ಪಡೆದಿದ್ದರು. ಬಳಿಕ ಭಾರತಕ್ಕೆ ವಾಪಸ್ ಬಂದಿದ್ದರು.
 

SCROLL FOR NEXT