ರಾಜ್ಯ

ಎಲ್ಲೆಲ್ಲೂ ಹರಕೆಯ ಭಂಡಾರ: ಹಳದಿ ಬಣ್ಣದ ಚಿತ್ತಾರ; ಚಿಕ್ಕೋಡಿಯ ಜಾತ್ರೆಯಲ್ಲಿ ಭಕ್ತರ ದಂಡು

Shilpa D

ಚಿಕ್ಕೋಡಿ; ಜಾತ್ರೆಗಳಂದರೇ ಏನೋ ಒಂಥರ ವಿಶಿಷ್ಟ ಅಚರಣೆಗಳೇ ಇರುತ್ತವೆ. ಒಂದೊಂದು ಜಾತ್ರೆಯಲ್ಲಿ ಒಂದೊಂದು ತೆರನಾದ ಆಚರಣೆ.. ಈ ಆಚರಣೆಗೆ ಅದರದೇ ಆದ ಹಿನ್ನೆಲೆ ಇರುತ್ತೆ...ಇಲ್ಲೊಂದು ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಭಂಡಾರ ತೂರಿ ಹರಕೆ ತೀರಿಸೋದು ನಡೆದು ಬಂದ ಸಂಪ್ರದಾಯ. 

ಹೌದು, ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ಅರಣ್ಯ ಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆಯ ಸಂದರ್ಭದಲ್ಲಿ ಪ್ರತಿ ವರ್ಷವೂ ಕೂಡ ಭಂಡಾರವನ್ನು ಹಾರಿಸಿ ದೇವರಿಗೆ ನಮಿಸೋದು ಇಲ್ಲಿನ ಸಂಪ್ರದಾಯ. ಭಂಡಾರ ಹಾರಿಸುವುದಾಗಿ ಈ ದೇವರಿಗೆ ಬೇಡಿಕೆ ಹೊತ್ತರೆ ತಮ್ಮ ಬೇಡಿಕೆ ಈಡೇರುತ್ತೇ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ. 

ಕಳೆದ ಹಲವು ವರ್ಷಗಳಿಂದ ಜಾತ್ರೆಯಲ್ಲಿ ಭಂಡಾರ ಹಾರಿಸುವ ರೂಢಿ ಬೆಳೆದುಕೊಂಡು ಬಂದಿದೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯು ಇಂದು ಸಮಾರೋಪಗೊಂಡಿದ್ದು , ಜಾತ್ರೆಯ ಕೊನೆಯ ದಿನವಾದ ಇಂದು ದೇವರ ಪಲ್ಲಕ್ಕಿಯ ಮೇಲೆ ಜನರು ಭಂಡಾರ ತೂರುವ ಮೂಲಕ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು. ಕೆಲವರು ಭಂಡಾರ ಹಾರಿಸಿ ವರವ ಕೊಡು ದೇವರೇ ಎಂದು ತಮ್ಮ ನಿವೇದನೆಯನ್ನು ದೇವರ ಮುಂದೆ ಇಟ್ಟರೆ, ಇನ್ನು ಕೆಲವರು ಬೇಡಿಕೆ ಈಡೇರಿದ ಮೇಲೆ ಹರಕೆ ತೀರಿಸುವ ಡಿಮ್ಯಾಂಡ್ ದೇವರ ಮುಂದಿಟ್ಟಿದ್ದಾರೆ.

ಇದೊಂದು ಜಾತ್ರೆಯಲ್ಲಿ ಅಷ್ಟೇ ಅಲ್ಲ, ಸವದತ್ತಿಯ ಯಲ್ಲಮ್ಮ, ಯಲ್ಪಾರಟ್ಟಿಯ ಅರಣ್ಯ ಸಿದ್ದೇಶ್ವರ, ನವಲಿಹಾಳದ ಬೀರೇಶ್ವರ ಸೇರಿದಂತೆ ನೂರಾರು ಕಡೆಗೆ ಈ ಭಾಗದಲ್ಲಿ ದೇವರ ಪಲ್ಲಕ್ಕಿಯ ಮೇಲೆ ಭಂಡಾರವನ್ನು ತೂರುವುದು ಸಂಪ್ರದಾಯವಾಗಿದೆ.

ಆದ್ರೆ ಎಲ್ಲೆಡೆಗಿಂತಲೂ ಕೆರೂರು ಗ್ರಾಮದ ಈ ಜಾತ್ರೆಯಲ್ಲಿ ಮಾತ್ರ ಎಲ್ಲೆಡೆಗಿಂತಲೂ ದುಪ್ಪಟ್ಟು ಭಂಡಾರ ಹಾರಿಸಲಾಗುತ್ತದೆ. ಈ ಭಾರಿಯಂತೂ ಜಾತ್ರೆಯಲ್ಲಿ ೧೫  ಟನ್ ಗೂ ಹೆಚ್ಚು ಪ್ರಮಾಣದಲ್ಲಿ ಭಂಡಾರವನ್ನು ಹಾರಿಸಲಾಯಿತು.  ಭಂಡಾರವೋ? ಇಲ್ಲ ಅದು ಬಂಗಾರವೋ ? ಎಂಬಂತೆ ಎಲ್ಲೆಲ್ಲೂ ಎಲ್ಲೋ ಎಲ್ಲೋ ಕಾಣ್ತಿತ್ತು. ಇದೇ ಸಂದರ್ಭದಲ್ಲಿ ಮುಂದಾಗಬಹುದಾದ ಮಳೆ ಬೆಳೆ, ಕೇಡು ಒಳಿತಿನ ಕುರಿತು ದೇವರ ಹೇಳಿಕೆಗಳು ಕೂಡ ನಡೆದವು . ಮುಂಬರುವ ವರ್ಷ ಸುಭಿಕ್ಷೆಯಿಂದ ಕೂಡಿದ್ದು, ಕೆಲವು ಕಂಟಕಗಳು ತಪ್ಪಿಲ್ಲ ಎಂದು ಹೇಳಲಾಗಿದೆ.  ಜಾತ್ರಾ ಮಹೋತ್ಸವ ನಿಮಿತ್ಯ ಕುದುರೆ ರೇಸ್ ಆಯೋಜನೆ ಮಾಡಲಾಗಿತ್ತು. 

ಒಟ್ಟಾರೆ,  ಎಲ್ಲೆಡೆಯೂ ಎಲ್ಲೆಲ್ಲೂ ಎಲ್ಲೋ ಎಲ್ಲೋ. ಹಳದಿ..ಹಳದಿಯಾಗಿರುವುದನ್ನು ನೋಡಿದರೇ ನೋಡುತ್ತಲೇ ನಿಲ್ಲಬೇಕು ಎಂದು ಅನ್ನಿಸುವಂತಹ ವಾತಾವರಣ. ಹಳದಿ ಬಣ್ಣದಲ್ಲಿ ಹಲವು ಚಿತ್ತಾರಗಳು ಮೂಡಿ ನೆರೆದವರನ್ನು ಮೋಡಿ ಮಾಡಿದ್ದಂತೂ ಸುಳ್ಳಲ್ಲ.

SCROLL FOR NEXT