ರಾಜ್ಯ

ರಾಮದುರ್ಗ: ಕೊಳಚಿ ಡ್ಯಾಂ ಎತ್ತರಕ್ಕೆ ಈಗಲೇ ಯೋಜನೆ ಸಿದ್ದಗೊಳ್ಳಲಿ

Lingaraj Badiger

ಬಾಗಲಕೋಟೆ: ಮಹಾದಾಯಿ ನ್ಯಾಯಾಧಿಕರಣದ ಅಂತಿಮ ಆದೇಶ ಹೊರ ಬೀಳುವ ಹೊತ್ತಿಗೆ ರಾಮದುರ್ಗ ತಾಲೂಕಿನ ಕೊಳಚಿ ಗ್ರಾಮದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿರುವ ನಿರ್ಮಿಸಲಾಗಿರುವ ಕೊಳಚಿ ಡ್ಯಾಂನ ಎತ್ತರವನ್ನು ಹೆಚ್ಚಿಸಲು ಸರ್ಕಾರ ಈಗಲೇ ಯೋಜನೆಯೊಂದನ್ನು ರೂಪಿಸಬೇಕಾದ ಅಗತ್ಯವಿದೆ.

ಮಹಾದಾಯಿ ನ್ಯಾಯಾಧಿಕರಣ ಅಂತಿಮ ಆದೇಶ ಹೋರಬಿದ್ದು, ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವಷ್ಟರಲ್ಲಿ ಕೊಳಚಿ ಡ್ಯಾಂನ ಎತ್ತರ ಹೆಚ್ಚಿಸುವುದರಿಂದ ಮಲಪ್ರಭಾ ನದಿಗೆ ಸೇರುವ ನೀರಿನ ಸ್ವಲ್ಪ ಭಾಗವನ್ನು ಇಲ್ಲಿ ಹಿಡಿದಿಟ್ಟುಕೊಳ್ಳಲು ಅನುಕೂಲವಾಗಲಿದೆ.

ಮಹಾದಾಯಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ಸಿಕ್ಕುವ ಅಷ್ಟೂ ನೀರನ್ನು ನವಿಲು ತೀರ್ಥ ಜಲಾಶಯದಲ್ಲೇ ಸಂಗ್ರಹಿಸುವ ಬದಲಿಗೆ ಕೊಳಚಿ ಡ್ಯಾಂನಲ್ಲೊಂದಿಷ್ಟು ಸಂಗ್ರಹಿಸುವುದರಿಂದ ಜಲಾಶಯದ ಕೆಳ ಭಾಗದಲ್ಲಿ ಬರುವ ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹುನಗುಂದ, ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಶಾಶ್ವತ ಕುಡಿವ ನೀರು ಪೂರೈಕೆ ಮಾಡಬಹುದಾಗಿದೆ.

ನವೀಲುತೀರ್ಥ ಜಲಾಶಯದಲ್ಲೇ ನೀರನ್ನು ಸಂಗ್ರಹಣೆ ಮಾಡುವುದರಿಂದ, ಸಂಗ್ರಹಗೊಳ್ಳುವ ನೀರು ಕೇವಲ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕೆಲ ಗ್ರಾಮಗಳಿಗೆ ಸೀಮಿತವಾಗಲಿದೆ ಎನ್ನುವ ಆತಂಕ ದೂರವಾಗಲಿದೆ. ಕುಡಿವ ನೀರಿನ ಪೂರೈಕೆಗೆ ಯೋಜನೆಗಳನ್ನು ರೂಪಿಸಲು ಸಹಕಾರಿ ಆಗಲಿದೆ ಎನ್ನುವುದು ಈ ಭಾಗದ ಮಹಾದಾಯಿ ಹೋರಾಟಗಾರರ ಅಭಿಪ್ರಾಯವಾಗಿದೆ. ಈ ಕುರಿತು ಪರ,ವಿರೋಧ ವ್ಯಕ್ತವಾಗುವ ಸಾಧ್ಯತೆಗಳಿವೆಯಾದರೂ ಪ್ರತಿ ವರ್ಷ ಬೇಸಿಗೆಯಲ್ಲಿ ಜಲಾಶಯದ ಕೆಳ ಭಾಗದಲ್ಲಿ ಉಂಟಾಗಬಹುದಾದ ತೀವ್ರ ಕುಡಿವ ನೀರಿನ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ.

ಮಹಾದಾಯಿಂದ ಮಲಪ್ರಭಾ ನದಿಗೆ ಬಂದು ಸೇರುವ ನೀರು ಬಾಗಲಕೋಟೆ, ಗದಗ, ಬೆಳಗಾವಿ ಜಿಲ್ಲೆಯ ಜನತೆಗೆ ಕುಡಿವ ನೀರು ಲಭ್ಯವಾಗಬೇಕು ಎನ್ನುವ ಹೋರಾಟದ ಉದ್ದೇಶವೂ ಈಡೇರಿದಂತಾಗಲಿದೆ ಎನ್ನುವುದು ಬಹುತೇಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿದಂತಾಗಲಿದೆ.

ಇದುವರೆಗೂ ಮಹಾದಾಯಿ ನೀರಿಗಾಗಿ ಬಾಗಲಕೋಟೆ, ಬೆಳಗಾವಿ, ಗದಗ ಮತ್ತು ಧಾರವಾಡ ಜಿಲ್ಲೆಯ ಜನತೆ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಅಂತಿಮ ತೀರ್ಪು ಹೊರ ಬಿದ್ದ ಬಳಿಕ ನವಿಲು ತೀರ್ಥ ಜಲಾಶಯದ ಕೆಳ ಭಾಗದ ಜನತೆ ತಮ್ಮ ಪಾಲಿನ ನೀರಿಗಾಗಿ ಹೋರಾಟಕ್ಕೆ ಇಳಿಯುವ ಮುನ್ನವೇ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಬೇಕು ಎನ್ನುವ ಅಭಿಪ್ರಾಯಕ್ಕೆ ಸೂಕ್ತ ಮನ್ನಣೆ ಸಿಗಬೇಕಿದೆ.

- ವಿಠ್ಠಲ ಆರ್.ಬಲಕುಂದಿ

SCROLL FOR NEXT