ರಾಜ್ಯ

ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಬೇಡ ಎಂದ ವನ್ಯಜೀವಿ ಮಂಡಳಿ: ಮನವಿ ಬಳಿಕ ಸಿಎಂ ಸಮ್ಮತಿ

Manjula VN

ಬೆಂಗಳೂರು: ಪಶ್ಚಿಮಘಟ್ಟದಲ್ಲಿ ಸುಮಾರು 2 ಲಕ್ಷದಷ್ಟು ಮಾರಣಹೋಮಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದ್ದ ಮಹತ್ವದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಸೋಮವಾರ ನಡೆದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಮಂಡಳಿಯ ಸದಸ್ಯರ ಒಕ್ಕೊರಲಿನ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಯೋಜನೆ ಕೈಬಿಡುವ ನಿರ್ಧಾರ ಕೈಗೊಂಡರು ಎಂದು ವರದಿಗಳು ತಿಳಿಸಿವೆ. 

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಿನ್ನೆ ನಡೆದ 13ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಯೋಜನೆಯ ಪಶ್ಚಿಮಘಟ್ಟದ ಮಹತ್ವದ ಅರಣ್ಯ ಸಂಪತ್ತನ್ನು ನಾಶಮಾಡುವುದರಿಂದ ಯೋಜನೆಯನ್ನು ಕೈಬಿಡಬೇಕು ಎಂದು ಮಂಡಳಿಯ ಸದಸ್ಯರು ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು. 

ಸಭೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಸಚಿವ ಆನಂದ್ ಸಿಂಗ್, ಮಂಡಳಿಯ ಸದಸ್ಯರಾದ ಸೌಮ್ಯಾರೆಡ್ಡಿ, ಸಂಜಯ್ ಗುಬ್ಬಿ ಹಾಗೂ ಅರಣ್ಯ ಇಲಾಖೆಯು ಅಧಿಕಾರಿಘಳು, ಉದ್ದೇಶಿತ ರೈಲು ಮಾರ್ಗದಲ್ಲಿ ಸಾಕಷ್ಟು ವನ್ಯಜೀವಿ ಸಂಪತ್ತು ಇದೆ. ಈ ಯೋಜನೆಯಿಂದ ಎರಡು ಲಕ್ಷಕ್ಕೂ ಹೆಚ್ಚು ಮರಗಳು ನಾಶವಾಗಲಿವೆ. ಕೇಂದ್ರ ಸರ್ಕಾರವೂ ಈ ಯೋಜನೆ ಮಾಡುವುದು ಸರಿಯಲ್ಲ ಎಂದು ಹೇಳಿದೆ. ಜೊತೆಗೆ, ಕೇಂದ್ರೀಯ ಉನ್ನತಾಧಿಕಾರಿ ಸಮಿತಿ ಈ ಯೋಜನೆ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. 

ಈಗಾಗಲೇ ಎರಡು ಬಾರಿ ವನ್ಯಜೀವಿ ಮಂಡಳಿಯಲ್ಲಿ ವಿಷಯ ಪ್ರಸ್ತಾಪವಾಗಿ ಮುಂದೂಡಲಾಗಿತ್ತು. ಆರ್ಥಿಕವಾಗಿಯೂ ಈ ಯೋಜನೆ ಲಾಭದಾಯಕವಲ್ಲ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೀಗಾಗಿ ಕೈಬಿಡುವುದು ಸೂಕ್ತವಲ್ಲ. ಹೀಗಾಗಿ ಈ ಯೋಜನೆಗೆ ವಿರೋಧ ಸರಿಯಲ್ಲ ಎಂದು ವಾದಿಸಿದ್ದರು ಎನ್ನಲಾಗಿದೆ. 

ಆದರೆ, ಪಟ್ಟು ಬಿಡದ ಉಳಿದ ಸದಸ್ಯರು, ಹೊಸಪೇಟೆ-ಲೋಂಡಾ-ವಾಸ್ಕೋ ರೈಲು ಮಾರ್ಗವನ್ನು ಜೋಡಿಹಳಿಯನ್ನಾಗಿ ಪರಿವರ್ತಿಸುವ ಕಾಮಗಾರಿ ನಡೆಯುತ್ತಿದೆ. ಈ ಯೋಜನೆ ಪೂರ್ಣಗೊಂಡಲ್ಲಿ ಹೊಸಪೇಟೆಯಿಂದ ಬಂದರಿಗೆ ಅದಿರು ಸಾಗಿಸಲು ಸುಲಭ. ಆದ್ದರಿಂದ ಹುಬ್ಭಳ್ಳಿ-ಅಂಕೋಲ ಯೋಜನೆ ಅಗತ್ಯವಿರುವುದಿಲ್ಲ ಎಂದು ವಾದಿಸಿದ್ದು, ಇದಕ್ಕೆ ಸಿಎಂ ಒಪ್ಪಿ, ಮುಂದಿನ ಕ್ರಮಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT