ರಾಜ್ಯ

ಗೊಂದಲಕ್ಕೆ ಕಾರಣವಾದ ಬಿಬಿಎಂಪಿ ಸುತ್ತೋಲೆ!

Nagaraja AB

ಬೆಂಗಳೂರು: ಸ್ಟಾರ್ ಹೋಟೆಲ್‌ಗಳು ಮತ್ತು ಮದುವೆ ಸಭಾಂಗಣಗಳಲ್ಲಿ ಕಾರ್ಯಕ್ರಮಗಳನ್ನು ನಿರ್ಬಂಧಿಸಿ ಗುರುವಾರ ಬಿಬಿಎಂಪಿ ವೈದ್ಯಕೀಯ ಆರೋಗ್ಯ ಅಧಿಕಾರಿ (ಶಿವಾಜಿನಗರ) ಹೊರಡಿಸಿದ ಸುತ್ತೋಲೆ ಗೊಂದಲಕ್ಕೆ ಕಾರಣವಾಯಿತು.

ಕೊರೋನಾ ವೈರಸ್ ಹಾಗೂ ಕಾಲರಾ ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರ ಸೂಚನೆ ಮೇರೆಗೆ ಪ್ರಮಾಣ ಪತ್ರ ಪಡೆಯದೆ ಸಭಾಂಗಣಗಳಲ್ಲಿ ಸಭೆ, ಅಥವಾ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿತ್ತು.

ಸಭಾಂಗಣಗಳಲ್ಲಿ  ಜನ ಸೇರುವ ಕಾರ್ಯಕ್ರಮಗಳು ನಡೆಯುವುದು ಕಂಡುಬಂದ ಪಕ್ಷದಲ್ಲಿ ವ್ಯಾಪಾರ ಅನುಮತಿಯನ್ನು ರದ್ದುಗೊಳಿಸಿ ವ್ಯಾಪಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿತ್ತು. 

ಇದರಿಂದ ಆತಂಕಕ್ಕೊಳಗಾದ ಅನೇಕ ಮಂದಿ ಸ್ಪಷ್ಟನೆ ಕೋರಿ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ ಬಳಿಕ  ಬಿಬಿಎಂಪಿ ವಿಶೇಷ ಆಯುಕ್ತ ರವಿಕುಮಾರ್ ಸುರ್ ಪುರ್ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಶಿವಾಜಿನಗರ ಎಂಒಹೆಚ್ಹೊರಡಿಸಿರುವ ಆದೇಶವನ್ನು  ಅನೂರ್ಜಿತಗೊಳಿಸಲಾಗಿದೆ. ಅವರು  ಯಾವುದೇ ನಿರ್ಬಂಧಗಳನ್ನು ಹೊರಡಿಸುವ ಅಧಿಕಾರ ಹೊಂದಿಲ್ಲ. ಹೊರಾಂಗಣ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಭೆಗಳ ಮೇಲೆ ಬಿಬಿಎಂಪಿ ಯಾವುದೇ ನಿಷೇಧ / ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಈ ಮಧ್ಯೆ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ನಗರದಲ್ಲಿ ಕಂಡುಬಂದ ಬೆನ್ನಲ್ಲೆ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲೂ ಮಾರ್ಚ್ 3ರಿಂದ ಇಳಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲು ಕೊರೋನಾ ವೈರಸ್ ಭೀತಿ ಕಾರಣ ಎಂದು ಬಿಎಂಆರ್ ಸಿಎಲ್  ಆಫರೇಷನ್ ಮತ್ತು ನಿರ್ವಹಣೆ ವಿಭಾಗದ ಕಾರ್ಯಕಾರಿ ನಿರ್ದೇಶಕ ಎ.ಎಸ್. ಶಂಕರ್ ತಿಳಿಸಿದ್ದಾರೆ. 

SCROLL FOR NEXT