ರಾಜ್ಯ

ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರ ಮನವೊಲಿಕೆ ಹೊಣೆ ಡಿ.ಕೆ.ಶಿವಕುಮಾರ್‌ಗೆ

Nagaraja AB

ಬೆಂಗಳೂರು: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ವಿರುದ್ಧ ಬಂಡಾಯ ಸಾರಿ ರಾಜ್ಯದಲ್ಲಿ  ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಕಾಂಗ್ರೆಸ್ ಹೈಕಮಾಂಡ್ ಹಾಗೂ  ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ರಾಜ್ಯದ ನಿಯೋಜಿತ ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಮೊರೆ ಹೋಗಿದ್ದಾರೆ.

ಬೆಂಗಳೂರಿನ ಹೊರ ವಲಯದ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರ ಮನವೊಲಿಕೆಗೆ ಆಗಮಿಸಿರುವ ಮಧ್ಯಪ್ರದೇಶದ ಶಿಕ್ಷಣ ಸಚಿವ ಜೀತು  ಪಟ್ವಾರಿ ನೇತೃತ್ವದ ತಂಡ, ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಮಾಲೋಚನೆ  ನಡೆಸಿ, ಮುನಿಸಿಕೊಂಡು ರಾಜ್ಯದಲ್ಲಿ ವಾಸ್ತವ್ಯ ಹೂಡಿರುವ ಶಾಸಕರನ್ನು ವಾಪಸ್  ಕರೆದುಕೊಂಡು ಹೋಗಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಶಾಸಕರ ಭೇಟಿಗೆ  ತೆರಳಿದ್ದ ಮಧ್ಯಪ್ರದೇಶ ಶಿಕ್ಷಣ ಸಚಿವ ಜೀತು ಪಟ್ವಾಯ್ ಹಾಗೂ ಅವರ ಜೊತೆಗೆ ಆಗಮಿಸಿದ್ದ  ಮಧ್ಯಪ್ರದೇಶದ ನಿಯೋಗದವರನ್ನು ಚಿಕ್ಕಜಾಲ ಪೊಲೀಸರು ವಶಕ್ಕೆ ಪಡೆದು, ಬಿಟ್ಟು  ಕಳುಹಿಸಿದ್ದಾರೆ.

ಡಿಕೆ ಶಿವಕುಮಾರ್ ಹಾಗೂ ಜೀತು ಪಟ್ವಾಯ್ ಅವರ ನಡುವೆ ಸುಮಾರು ಒಂದು ಗಂಟೆಯವರೆಗೂ ಸಭೆ ನಡೆದಿದ್ದು, ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ ನೀಡಿದ ಬಳಿಕ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಆದರೆ, ಸ್ಪೀಕರ್ ಎನ್. ಪಿ. ಪ್ರಜಾಪತಿ ರಾಜೀನಾಮೆ ಸ್ವೀಕರಿಸಿಲ್ಲ. ತಮ್ಮ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.ರಾಜೀನಾಮೆಗೆ ಕಾರಣಗಳನ್ನು ಡಿಕೆ ಶಿವಕುಮಾರ್ ಅವರಿಗೆ ಜೀತು ಪಟ್ವಾಯ್ ತಿಳಿಸಿದ್ದಾರೆ. 

2019 ಜುಲೈನಲ್ಲಿ ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದಾಗ ಮೈತ್ರಿ ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಮುಂಬೈಗೆ ಹೋಗಿ ತಮ್ಮ ಪಕ್ಷದ ಶಾಸಕರನ್ನು ಮನವೊಲಿಸಲು ಪ್ರಯತ್ನಿಸಿ ವಿಫಲವಾಗಿದ್ದರು. ಈ ಬಾರಿ ಮಧ್ಯಪ್ರದೇಶ ಕಾಂಗ್ರೆಸ್ ನ್ನು ರಕ್ಷಿಸಲಿದ್ದಾರೆ ಎಂಬ ಭರವಸೆ ಹೊಂದಿರುವುದಾಗಿ ಜೀತು ಪಟ್ವಾಯ್ ಭರವಸೆ ವ್ಯಕ್ತಪಡಿಸಿದ್ದಾರೆ. 

ಮಧ್ಯಪ್ರದೇಶ ಆಸೆಂಬ್ಲಿಯಲ್ಲಿ ಕಾಂಗ್ರೆಸ್ 120 ಶಾಸಕರನ್ನು ಹೊಂದಿದ್ದು, ಬಹುಮತ ಸಾಬೀತಿಗೆ 116 ಶಾಸಕರ ಬೆಂಬಲ ಅಗತ್ಯವಿದೆ. ಈ ಪೈಕಿ 22 ಶಾಸಕರು ರಾಜೀನಾಮೆ ನೀಡಿರುವುದರಿಂದ ಇತರ ಪಕ್ಷಗಳ ಶಾಸಕರ ಬೆಂಬಲ ಪಡೆಯಲೇಬೇಕಾಗಿದೆ. ಬಿಎಸ್ಪಿ , ಎಸ್ಪಿ 3 ಹಾಗೂ ಇತರ ನಾಲ್ವರು ಪಕ್ಷೇತರ ಶಾಸಕರು ಬೆಂಬಲ ನೀಡದೆ ಹೋದ ಪಕ್ಷದಲ್ಲಿ ಸರ್ಕಾರ ಪತನವಾಗಲಿದೆ.

ಮಧ್ಯಪ್ರದೇಶದ ಬಂಡಾಯ ಕಾಂಗ್ರೆಸ್ ಶಾಸಕರು ಪ್ರಜಾಪ್ರಭುತ್ವವನ್ನು  ಹತ್ಯೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವರ ಬೆಂಬಲದಿಂದ ಈ ರೀತಿಯ ಕೃತ್ಯ ಮಾಡುತ್ತಿರುವುದು ಸಂವಿಧಾನದ 10ನೇ ಷೆಡ್ಯೂಲ್ ಗೆ ವಿರುದ್ಧವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮುಖಂಡ ಎಚ್. ಕೆ. ಪಾಟೀಲ್ ಹೇಳಿದ್ದಾರೆ.

SCROLL FOR NEXT