ರಾಜ್ಯ

ಕೊರೋನ ತಡೆಗೆ ಎನ್ ಡಿಆರ್ ಎಫ್ ಹಣ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆ ಬೇಕಾದ ಔಷಧ, ಸ್ವಚ್ಚತೆ, ಸ್ಯಾನಿಟೇಷನ್, ಮತ್ತಿತರೆ ಅಗತ್ಯ ಉಪಕರಣಗಳ ಖರೀದಿಗೆ ಎನ್ ಡಿಆರ್ ಎಫ್ ಹಣ ಬಳಸಲು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಕೊರೋನಾ ವೈರಸ್ ನಿಯಂತ್ರಣಕ್ಕೆ ಎಸ್ ಡಿಆರ್ ಎಫ್ ನ 84 ಕೋಟಿ ರೂ. ಹಣ ವಿನಿಯೋಗ ಮಾಡಲು ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು. 

ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಲ್ಲಿ ಮೀಸಲಿರುವ 84 ಕೋಟಿ ರೂ. ಖರ್ಚು ಮಾಡಲು ಕಂದಾಯ ಇಲಾಖೆಗೆ ಸೂಚಿಸಿದೆ. ಈಗಾಗಲೇ ಎನ್ ಡಿ ಆರ್ ಎಫ್ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಎನ್ ಡಿ ಆರ್ ಎಫ್ ಮೀಸಲು ಹಣದಲ್ಲಿ ಶೇ.25 ರಷ್ಟು ಹಣ ಬಳಸಲು ಕೇಂದ್ರ ಅನುಮತಿ ನೀಡಿದೆ ಎಂದರು.

ಕೊರೋನಾ ವೈರಸ್ ಸೋಂಕು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ಹಣ ಬಳಕೆಗೆ ಅನುಮತಿ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಜತೆ ಸಭೆ ನಡೆಸಿ ಹಣ ವಿನಿಯೋಗ ಕುರಿತು ಎಲ್ಲಾ ಜಿಲ್ಲಾಡಳಿತಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು. 

ಇದುವರೆಗೆ ರಾಜ್ಯ ಸರ್ಕಾರವೇ ಹಣ ಖರ್ಚು ಮಾಡಬೇಕಿತ್ತು. ಈಗ ಕೇಂದ್ರ ಸರ್ಕಾರದ ಹಣ ಖರ್ಚು ಮಾಡಲು ಅನುಮತಿ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದರು.

ಕೊರೋನ ವಿರುದ್ದ ಹೋರಾಡಲು ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರವನ್ನು ಆಗ್ರಹಪಡಿಸಿದ್ದರು.

SCROLL FOR NEXT