ರಾಜ್ಯ

ಬೆಂಗಳೂರು: ಕೊರೋನಾಗೆ ಹೆದರದ ಕ್ಲಬ್‍ಗಳ ಮೇಲೆ ಸಿಸಿಬಿ ದಾಳಿ: 42ಜನರ ಬಂಧನ

Vishwanath S

ಬೆಂಗಳೂರು: ಕೋರಾನಾ ವೈರಸ್ ಭೀತಿಯನ್ನು ಲೆಕ್ಕಿಸದೆ ನಗರದ ಸಿಂಚನ ಹಾಗೂ ಸ್ಕೈಲೈನ್ ಕ್ಲಬ್ ಗಳಲ್ಲಿ ಕಾನೂನು ಬಾಹಿರವಾಗಿ ಜೂಜಾಡುತ್ತಿದ್ದವರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 42 ಜನರನ್ನು ಬಂಧಿಸಿದ್ದಾರೆ.

ಸಿಂಚನ ಕ್ಲಬ್ ಮಾಲೀಕ ಶ್ರೀನಿವಾಸ್ ಸೇರಿ 25ಜನರನ್ನು ಬಂಧಿಸಲಾಗಿದ್ದು, 61,200ರೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಅರಸಿಕೆರೆಯಲ್ಲಿರುವ ಕ್ಲಬ್ ನಲ್ಲಿ ಸದಸ್ಯರಲ್ಲದವರು ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸೋಮವಾರ ದಾಳಿ ನಡೆಸಿದ್ದರು.

ಅಲ್ಲದೇ, ಸಾಂಕ್ರಾಮಿಕ ರೋಗ ತಡೆಗಟ್ಟಲು ಹಿನ್ನೆಲೆಯಲ್ಲಿ ನಗರದ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ಉಲ್ಲಂಘಿಸಿ, ಸಾರ್ವಜನಿಕ ರು ಒಂದೆಡೆ ಸೇರಿ ಜೂಜಾಡಲು ಅವಕಾಶ ಮಾಡಿಕೊಟ್ಟ ಕಾರಣ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಸ್ಕೈಲೈನ್ ಕ್ಲಬ್ ಮೇಲೂ ಸಿಸಿಬಿ ಪೊಲೀಸರು ದಾಳಿ ನಡೆಸಿ, 16 ಜನರನ್ನು ಬಂಧಿಸಿದ್ದಾರೆ.

ಕ್ಲಬ್ ಸೆಕ್ರೆಟರಿ ಶ್ರೀನಿವಾಸ್ ಸೇರಿ 16 ಜನರನ್ನು ಬಂಧಿಸಲಾಗಿದ್ದು, 2, 11.500 ರೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸವೇಶ್ವರ ನಗರದ ಸ್ಕೈಲೆನ್ ಕ್ಲಬ್ ನಲ್ಲಿ ಸದಸ್ಯರಲ್ಲದವರು ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸೋಮವಾರ ದಾಳಿ ನಡೆಸಿದ್ದರು. ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿ ವಿಶೇಷ ವಿಚಕ್ಷಣ ದಳದ ಸಹಾಯಕ ಪೊಲೀಸ್ ಆಯುಕ್ತ ಡಿಟಿ ವಿರೂಪಾಕ್ಷಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

SCROLL FOR NEXT