ರಾಜ್ಯ

ಕಲಬುರಗಿ: ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು

Srinivasamurthy VN

ಕಲಬುರಗಿ: ಬಿಸಿಲು ನಗರಿ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ ತುತ್ತಾಗಿದ್ದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು ಹತ್ತಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಬಿಸಿಲು ನಗರಿ ಕಲಬುರಗಿಯಲ್ಲಿ ಕೊರೊನಾ ವೈರಸ್ ಬೇತಾಳದಿಂದ ಬೆಂಬಿಡದೇ ಬೆನ್ನುಹತ್ತಿದೆ. ಇತ್ತೀಚೆಗಷ್ಟೇ ಕೊರೊನಾ ವೈರಸ್ ಸೋಂಕಿಗೆ ಬಲಿಯಾದ ಕಲಬುರಗಿ ವೃದ್ಧನ ಸಂಬಂಧಿಕನಲ್ಲಿ ಸೋಂಕು ದೃಢಪಟ್ಟಿತ್ತು. ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಇದೀಗ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೊರೊನಾ ಎಂದರೇ ಕಲಬುರಗಿ ಜನತೆ ಬೆಚ್ಚಿಬೀಳುವಂತಾಗಿದೆ.

ವೃದ್ಧನಿಗೆ ಚಿಕಿತ್ಸೆ ನೀಡಿದ್ದ 63 ವರ್ಷದ ವೈದ್ಯನಿಗೆ ಸೋಂಕು ದೃಢಪಟ್ಟಿದ್ದು, ವೈದ್ಯ ಮತ್ತು ಅವರ ಕುಟುಂಬವನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ನಿಗಾ ಇಡಲಾಗಿದೆ. ಇವತ್ತು ಅವರನ್ನು ಐಸೋಲೇಷನ್ ವಾರ್ಡ್‌ಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್ ಬಿ ಸ್ಪಷ್ಟಪಡಿಸಿದ್ದಾರೆ. 

ಇನ್ನು ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 39ಕ್ಕೆ ಏರಿಕೆಯಾಗಿದ್ದು ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣ ಸಂಖ್ಯೆ 127 ಆಗಿದೆ. ಏತನ್ಮಧ್ಯೆ,  ಉತ್ತರಾಖಂಡ್‌ನಲ್ಲಿ ಮೊದಲ ಕೋವಿಡ್- 19 ಪ್ರಕರಣ ವರದಿಯಾಗಿದೆ. ಮಂಗಳವಾರ ಉತ್ತರ ಪ್ರದೇಶದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.

SCROLL FOR NEXT