ರಾಜ್ಯ

ರಾಜ್ಯದಲ್ಲಿ ಐವರು ಕೊರೋನಾ ಸೋಂಕು ಪೀಡಿತರು ಚೇತರಿಸಿಕೊಂಡಿದ್ದಾರೆ: ಶ್ರೀರಾಮುಲು

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಮಾರಣಾಂತಿಕ ಕೋವಿಡ್ -19 ಸೋಂಕು ದೃಢಪಟ್ಟ 15 ಮಂದಿಯ ಪೈಕಿ ಐವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಒಬ್ಬ ಟೆಕ್ಕಿ ಹಾಗೂ ಅವರ ಪತ್ನಿ ಸೇರಿದಂತೆ ಐವರು 
ಚೇತರಿಸಿಕೊಂಡಿದ್ದು, ಅವರನ್ನು ಮತ್ತಷ್ಟು ಪರೀಕ್ಷೆಗಳಿಗೆ ಒಳಪಡಿಸಿ ಮನೆಗಳಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಕೋವಿಡ್ -19 ಸೋಂಕಿತ ವ್ಯಕ್ತಿಗಳು ಚೇತರಿಸಿಕೊಂಡಿರುವುದು, ಸೋಂಕು ವಿಪತ್ತುಕಾರಿಯಲ್ಲ ಎಂಬುದು ರುಜುವಾತಾಗಿದೆ. ಸೂಕ್ತ ಚಿಕಿತ್ಸೆ ರೋಗವನ್ನು ಶಮನಗೊಳಿಸಬಹುದು. ಹಾಗಾಗಿ ಜನರು ಈ ರೋಗದ ಬಗ್ಗೆ ಅನಗತ್ಯ ಭೀತಿಗೊಳಗಾಗುವುದು ಬೇಡ ಎಂದು ಧೈರ್ಯ ಹೇಳಿದರು. 

ರಾಜ್ಯದಲ್ಲಿ ಒಟ್ಟು 1,042 ಮಂದಿಯ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 915 ಮಂದಿಯಲ್ಲಿ ನಕಾರಾತ್ಮಕ ಫಲಿತಾಂಶ ಹೊರಬಿದ್ದಿದ್ದು, ಇನ್ನೂ ಉಳಿದ ವ್ಯಕ್ತಿಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ವಿವರಿಸಿದರು.

ಎಲ್ಲ ಅಂತರಾಷ್ಟ್ರೀಯ ವಿಮಾನಗಳಿಂದ ಬರುವ ಪ್ರಯಾಣಿಕರನ್ನು ಸರ್ಕಾರ ತಪಾಸಣೆಗೊಳಪಡಿಸುತ್ತಿದೆ. ಸೋಂಕಿನ ಲಕ್ಷಣ ಹೊಂದಿದವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಎಂದರು.

ಕೋವಿಡ್ -19 ರೋಗಗಳಿಗೆ ವಿಶೇಷವಾಗಿ ಚಿಕಿತ್ಸೆ ಕಲ್ಪಿಸಲು ರಾಜ್ಯ ಸರ್ಕಾರ ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸುವ ಯೋಜನೆ ಹೊಂದಿದೆ ಸಚಿವ ಶ್ರೀರಾಮುಲು ಪ್ರಕಟಿಸಿದರು.

ರಾಜ್ಯದಲ್ಲಿ ಈವರೆಗೆ 15 ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 76 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT