ರಾಜ್ಯ

ಶುಲ್ಕ ವಿವರ ನೀಡದ ಖಾಸಗಿ ಶಾಲೆಗಳ ವಿರುದ್ಧ ದಂಡ ಹಾಕಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ 

Sumana Upadhyaya

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಮಕ್ಕಳ ಪೋಷಕರಿಂದ ತೆಗೆದುಕೊಳ್ಳುವ ಶುಲ್ಕದ ವಿವರ, ಶಿಕ್ಷಕ-ಶಿಕ್ಷಕಿಯರ ಮಾಹಿತಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾದ ಖಾಸಗಿ ಶಾಲೆಗಳ ವಿರುದ್ಧ ದಂಡ ಹಾಕಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.


ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ದಂಡದ ವಿವರಣೆ ಅಪ್ ಲೋಡ್ ಮಾಡಲು 6 ವಾರಗಳ ಸಮಯಾವಕಾಶ ನೀಡಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ಅಡ್ವೊಕೇಟ್ ಎನ್ ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ತೀರ್ಪು ನೀಡಿತು.


ಈ ಮಧ್ಯೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ವಿವರಣೆ ನೀಡಿ ಕರ್ನಾಟಕ ಶಿಕ್ಷಣ ಕಾಯ್ದೆಗೆ 2017ರಲ್ಲಿ ತಿದ್ದುಪಡಿ ತಂದಿದ್ದು ಸೆಕ್ಷನ್ 112 ಎಯನ್ನು ಜಾರಿಗೆ ತರಲಾಗಿದೆ ಎಂದಿದೆ.


ಈ ತಿದ್ದುಪಡಿ ಪ್ರಕಾರ, ವಿದ್ಯಾರ್ಥಿಗಳ ಸುರಕ್ಷತೆ, ಭದ್ರತೆ ವಿಚಾರದಲ್ಲಿ ಯಾವುದೇ ಲೋಪದೋಷಗಳನ್ನು ಉಂಟುಮಾಡಿದರೆ 1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಜೊತೆಗೆ ಶಾಲೆಯ ವ್ಯವಸ್ಥಾಪಕ ಮಂಡಳಿಯ ಉದ್ಯೋಗಿ ಅಥವಾ ಸದಸ್ಯರಿಗೆ ಕನಿಷ್ಠ 6 ತಿಂಗಳು ಶಿಕ್ಷೆ ನೀಡಲಾಗುತ್ತದೆ.


ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ನಡೆಸಿದ ವಿಚಾರಣೆಯ ವೇಳೆ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಶಿಕ್ಷಣ ಸಂಸ್ಥೆಯ ಮಾನ್ಯತೆ ರದ್ದುಪಡಿಸಬಹುದು ಮತ್ತು 10 ಲಕ್ಷ ರೂಗಳವರೆಗೆ ದಂಡ ವಿಧಿಸಬಹುದು. ಹೆಚ್ಚುವರಿ ಶುಲ್ಕವನ್ನು ಮರುಪಾವತಿಸಬೇಕು ಎಂದು ಕಾಯ್ದೆ ಹೇಳುತ್ತದೆ.

SCROLL FOR NEXT