ರಾಜ್ಯ

ಕೊರೋನಾ ಎಫೆಕ್ಟ್: ಕಳ್ಳರಿಗೂ ಭೀತಿ ಹುಟ್ಟಿಸಿದ ವೈರಸ್, ನಗರದಲ್ಲಿ ಅಪರಾಧ ಸಂಖ್ಯೆಗಳು ಗಣನೀಯ ಇಳಿಕೆ

Manjula VN

ಬೆಂಗಳೂರು: ಇಡೀ ದೇಶವನ್ನೇ ಬಚ್ಚಿ ಬೀಳಿಸುತ್ತಿರುವ ಕೊರೋನಾ ವೈರಸ್'ಗೆ ಇದೀಗ ಸರಗಳ್ಳತನ, ದರೋಡೆ, ಕೊಲೆಯಂತಹ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಳ್ಳರನ್ನೂ ಭೀತಿಗೊಳಗಾಗವಂತೆ ಮಾಡಿದೆ. ವೈರಸ್ ರಾಜ್ಯದಲ್ಲಿ ಕಾಲಿಡುತ್ತಿದ್ದಂತೆಯೇ ಹೆದರಿರುವ ಕಳ್ಳರು, ದರೋಡೆಕೋರರು ಮನೆಗಳಲ್ಲಿಯೇ ಕುಳಿತಂತೆ ಕಂಡುಬಂದಿದ್ದು, ಇದರ ಪರಿಣಾಮ ವೈರಸ್ ಬೆಳಕಿಗೆ ಬಂದ ಬಳಿಕ ನಗರದಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಕೆಲ ದಿನಗಳಿಂದ ಸಳ್ಳತನ, ದರೋಡೆ ಹಾಗೂ ವಾಹನ ಕಳ್ಳತನದಂತಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಶೇ.25ರಷ್ಟು ದರೋಡ ಪ್ರಕರಣಗಳು ಕಡಿಮೆಯಾಗಿವೆ ಎಂದು ತಿಳಿಸಿದ್ದಾರೆ. 

ವೈರಸ್ ನಿಂದಾಗಿ ಜನರು ಅನಿವಾರ್ಯವಾಗಿಯೇ ಮನೆಯಲ್ಲಿರಬೇಕಾದ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಕಳ್ಳರೂ ಕೂಡ ತಮ್ಮ ಯೋಜನೆಗಳನ್ನು ಮುಂದೂಡಿ. ಮನೆಯಲ್ಲಿಯೇ ಇರುವಂತಾಗಿದೆ ಎಂದಿದ್ದಾರೆ. 

ಕೇವಲ ಕೊರೋನಾ ವೈರಸ್ ನಿಂದಲೇ ಅಪರಾಧ ಕೃತ್ಯಗಳು ಕಡಿಮೆಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಬೇರೆ ಕಾರಣಗಳೂ ಕೂಡ ಇರಬಹುದು. ಮನೆಗಳಿಂದ ಜನರು ಹೊರಗ ಬರುವುದು ಕಡಿಮೆಯಾದರೆ, ಸಾಮಾನ್ಯವಾಗಿಯೇ ದರೋಡೆ ಪ್ರಕರಣಗಳೂ ಕೂಡ ಕಡಿಮೆಯಾಗುತ್ತವೆ. ಮಹಿಳೆಯರು ಕೂಡ ಮನೆಯಿಂದ ಅತ್ಯಂತ ವಿರಳವಾಗಿ ಹೊರಗೆ ಬರುತ್ತಿದ್ದರೆ. ಕಳೆದೆರಡು ವಾರಗಳಿಂದ ಸರಗಳ್ಳತನ ಪ್ರಕರಣಗಳು ವರದಿಯಾಗಿಲ್ಲ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಕಳ್ಳರು ಹಾಗೂ ದರೋಡೆಕೋರರಿಗೂ ವೈರಸ್ ಭೀತಿ ಹುಟ್ಟಿಸಿದೆ. ವೈರಸ್ ಹಬ್ಬುತ್ತಿರುವುದರಿಂದ ಕಳ್ಳತನಕ್ಕಿದು ಸಕಾಲವಲ್ಲ ಎಂಬುದು ಅವರಿಗೂ ಗೊತ್ತಿದೆ ಎಂದು ಡಿಸಿಪಿ ವಿಭಾಗದ ಪೊಲೀಸ್ ಒಬ್ಬರು ತಿಳಿಸಿದ್ದಾರೆ. 

SCROLL FOR NEXT