ರಾಜ್ಯ

ಕೊರೋನಾ ವೈರಸ್: ಮದುವೆ ಮುಂದೂಡಿ ಇತರರಿಗೆ ಮಾದರಿಯಾದ ತುಮಕೂರಿನ ಜೋಡಿ

Lingaraj Badiger

ತುಮಕೂರು: ವಿದೇಶದಿಂದ ಬರುವ 'ಹೈ-ಪ್ರೊಫೈಲ್' ಜನ, ಮದುವೆ ಸಮಾರಂಭ ಹಾಗೂ ಹೆಚ್ಚು ಜನ ಸೇರುವ ಇತರೆ ಕಾರ್ಯಕ್ರಮಗಳಿಂದ ದೂರವಿರುವಂತೆ ಸರ್ಕಾರ ಸೂಚಿಸಿದರು ಅದನ್ನು ಉಲ್ಲಂಘಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಕೊರೋನಾ ವೈರಸ್ ಹರಡುವದನ್ನು ತಡೆಯುವುದಕ್ಕಾಗಿ ತುಮಕೂರಿನ ಕ್ಯಾತಸಂದ್ರದ ಯುವ ಜೋಡಿಯೊಂದು ತಮ್ಮ ಮದುವೆ ಸಮಾರಂಭ ಮುಂದೂಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಮದುವೆ, ನಿಶ್ಚಿತಾರ್ಥ ಹಾಗೂ ಇತರೆ ಕಾರ್ಯಕ್ರಮಗಳನ್ನು ಮುಂದೂಡುವಂತೆ ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ಕ್ಯಾತಸಂದ್ರದ ರಾಕೇಶ್ ಎಂಪಿ ಹಾಗೂ ವರಮಹಾಲಕ್ಷ್ಮಿ ಜೋಡಿಯ ಮದುವೆಯನ್ನು ರದ್ದು ಮಾಡಲಾಗಿದೆ. 

ಇಂದು ಸಂಜೆ ಆರತಕ್ಷತೆ ಹಾಗೂ ನಾಳೆ ಮುಹೂರ್ತ ನಿಗದಿಯಾಗಿತ್ತು. ಈಗಾಗಲೇ 1 ಸಾವಿರ ಜನರಿಗೆ ಮದುವೆ ಕಾರ್ಡ್ ಗಳನ್ನು ನೀಡಲಾಗಿದೆ. ಆದರೆ ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ಶುಕ್ರವಾರ ನಿಷೇಧಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಮದುವೆ ಮುಂದೂಡಲು ನಿರ್ಧರಿಸಿದ್ದಾರೆ.

ಐದು ದಿನಗಳ ಹಿಂದೆಯೇ ನಾವು ಮದುವೆ ಮಂದೂಡುವ ನಿರ್ಧಾರ ತೆಗೆದುಕೊಂಡೆವು ಮತ್ತು ಈ ವಿಚಾರವನ್ನು ಎಲ್ಲಾ ಸಂಬಂಧಿಗಳಿಗೆ ಮತ್ತು ಸ್ನೇಹಿತರಿಗೆ ವಾಟ್ಸ್ ಆಪ್ ಮತ್ತು ಮೆಸೇಜ್ ಗಳ ಮೂಲಕ ತಿಳಿಸಿದ್ದೇವೆ. ನಮ್ಮ ಮತ್ತು ನಮ್ಮ ಆತ್ಮೀಯರ ಸುರಕ್ಷತೆಯ ದೃಷ್ಟಿಯಿಂದ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವರನ ಹಿರಿಯ ಸಹೋದರ ಶಿವಕುಮಾರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮದುವೆ ರದ್ದಾಗಿದ್ದರಿಂದ ನಮಗೆ 10 ಸಾವಿರ ರೂ. ನಷ್ಟ ಆಗಬಹುದು. ಆದರೆ ಜನರ ಆರೋಗ್ಯ ಮುಖ್ಯ ಎಂದು ಅವರು ಹೇಳಿದ್ದಾರೆ.

SCROLL FOR NEXT