ರಾಜ್ಯ

ಕಮಲ್ ನಾಥ್ ರಾಜೀನಾಮೆ: ತವರಿನತ್ತ ಮುಖ ಮಾಡಿದ ಮ.ಪ್ರದೇಶದ ಬಂಡಾಯ ಶಾಸಕರು

Manjula VN

ಬೆಂಗಳೂರು: ಕಮಲ್ ನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ರೆಸಾರ್ಟ್ ನಲ್ಲಿದ್ದ ಮಧ್ಯಪ್ರದೇಶದ ಬಂಡಾಯ ಶಾಸಕರು ಇದೀಗ ತವರಿಗೆ ತೆರಳಲು ಮುಂದಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಜ್ಯೋತಿರಾಧಿತ್ಯ ಸಿಂಧಿಯಾ ಬಣದ 22 ಕಾಂಗ್ರೆಸ್ ಶಾಸಕರು ನೀಡಿದ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿದ್ದ ಕಮಲ್ ನಾಥ್ ಅವರು, ಶುಕ್ರವಾರ ರಾಜ್ಯಪಾಲ ಲಾಲ್ ಜಿ ಟಂಡನ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ಈ ಮೂಲಕ ಕಳೆದ 18 ದಿನಗಳ ಹೈಡ್ರಾಮಾಗೆ ತೆರೆ ಬಿದ್ದಿತ್ತು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 22 ಕಾಂಗ್ರೆಸ್ ಬಂಡಾಯ ಶಾಸಕರು ಬೆಂಗಳೂರಿನ ರೆಸಾರ್ಟ್ ನಲ್ಲಿ ತಂಗಿದ್ದರು. ಕಮಲ್ ನಾಥ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಭೋಪಾಲ್'ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಕಮಲ್ ನಾಥ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿಯಲ್ಲಿ ಸರ್ಕಾರ ರಚನೆ ಕುರಿತ ಚಟುವಟಿಕೆಗಳು ಆರಂಭವಾಗಿವೆ. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಮುಕಂಡ ನರೋತ್ತಮ ಮಿಶ್ರಾ ಅವರ ಹೆಸರುಗಳು ಸಿಎಂ ಹುದ್ದೆಗೆ ಕೇಳಿಬರುತ್ತಿವೆ. ಆದರೆ, ಕೊನೆಗೆ ಚೌಹಾಣ್ ಅವರೇ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎಂದು ಮೂಲಗಳಿಂದ ತಿಳಿದುಬಂದಿದೆ. 

SCROLL FOR NEXT