ರಾಜ್ಯ

ಕೊರೋನಾ ಚಿಕಿತ್ಸೆಗೆ ಸರ್ಕಾರ ವಿಶೇಷ ಪ್ಯಾಕೆಜ್ ನೀಡಬೇಕು:ಡಿ ಕೆ ಶಿವಕುಮಾರ್ 

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ನಿಯಂತ್ರಣ ಹಾಗೂ ಅದರಿಂದಾಗುವ ಪ್ರತಿಕೂಲ ಪರಿಸ್ಥಿತಿ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.


ಕೊರೋನಾ ಪರಿಸ್ಥಿತಿ ಕುರಿತು ಸದಾಶಿವನಗರ ನಿವಾಸದಲ್ಲಿ ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕೊರೋನಾ ಸೋಂಕು ಮಹಾಮಾರಿಯಾಗಿ ಕಾಡುತ್ತಿದೆ. ಇದನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು. ಈಗಾಗಲೇ ಇದರಿಂದ ಸಾಕಷ್ಟು ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇದೇ ಬಜೆಟ್ ನಲ್ಲಿ ಈ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ತಿಳಿಸಿದರು.


ದಿನೇ ದಿನೆ ಕೊರೋನಾ ಸೋಂಕು ತೀವ್ರತೆ ದೊಡ್ಡದಾಗುತ್ತಿದೆ. ದೇಶದಲ್ಲಿ 250ಕ್ಕೂ ಹೆಚ್ಚು ಮಂದಿ ಸೋಂಕಿತರಾದರೆ ರಾಜ್ಯದಲ್ಲಿ 18 ಮಂದಿ ಸೋಂಕಿತರಾಗಿದ್ದಾರೆ. ಈಗ ಘೋಷಿಸಿರುವ ಯೋಜನೆಗಳಲ್ಲಿ ಯಾವುದರಲ್ಲಾದರೂ ಕಡಿಮೆ ಮಾಡಿ ಈ ತುರ್ತು ಪರಿಸ್ಥಿತಿ ನಿಭಾಯಿಸಲು ಮುಂದಾಗಬೇಕು. ಇದಕ್ಕೆ ನಾವು ಬೆಂಬಲ ನೀಡುತ್ತೇವೆ. ಪಕ್ಕದ ಕೇರಳ ರಾಜ್ಯದಲ್ಲಿ 20 ಸಾವಿರ ಕೋಟಿ ಪ್ಯಾಕೇಜ್ ಬಿಡುಗಡೆ ಮಾಡಲಾಗಿದ್ದು, ನಮ್ಮ ರಾಜ್ಯದ ಭೌಗೋಳಿಕ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪ್ಯಾಕೇಜ್ ಘೋಷಣೆಯಾಗಬೇಕಿದೆ ಎಂದರು.


ಸರ್ಕಾರ ಸಾಮಾನ್ಯ ಜನರ ಪರವಾಗಿ ನಿಲ್ಲಬೇಕಿದೆ. ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲವಾಗಿದೆ. ರೇಷ್ಮೆ ಬೆಲೆ ಕುಸಿದಿದೆ. 600 ಇದ್ದ ಬೆಲೆ 200ಕ್ಕೆ ಕುಸಿದಿದೆ. ಇದೇ ರೀತಿ ತರಕಾರಿ ಸೇರಿದಂತೆ ಎಲ್ಲ ಬೆಳೆಯ ಬೆಲೆ ಕುಸಿದಿದೆ. ಕುಕ್ಕೂಟೋದ್ಯಮ, ಹೈನೊದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ರಸ್ತೆ ವ್ಯಾಪಾರಿಗಳಿಂದ ದೊಡ್ಡ ಉದ್ದಿಮೆವರೆಗೂ ಪ್ರತಿಯೋಬ್ಬರಿಗೂ ಪೆಟ್ಟು ಬಿದ್ದಿದೆ. ಸಾಮಾನ್ಯ ಜನರು, ಕಾರ್ಮಿಕರು ಹಾಗೂ ಅವರಿಗೆ ಉದ್ಯೋಗ ನೀಡಿರುವ ಉದ್ದಿಮೆದಾರರು ಎಲ್ಲರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ವಿನಮ್ರ ಮನವಿ ಮಾಡುತ್ತೇನೆ ಎಂದರು.


ಮೊದಲು ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರವ್ಯಾಪಿ ನಷ್ಟದ ಕುರಿತು ಸರ್ವೆ ನಡೆಸಬೇಕು. ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿಕೊಂಡರೆ ಕಷ್ಟ. ಖಾಸಗಿ ಆಸ್ಪತ್ರೆಗಳ ಜತೆ ಕೈಜೋಡಿಸಬೇಕು. ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಬಳಸಿಕೊಳ್ಳಬೇಕು. ಈ ವಿಚಾರದಲ್ಲಿ ಸಮರೋಪಾದಿಯಲ್ಲಿ ಕಾರ್ಯವಾಗಬೇಕು ಎಂದರು.


ಈ ಮಧ್ಯೆ ಸೋಂಕು ನಿಯಂತ್ರಿಸಲು ಜನರು ಸ್ವಯಂ ಪ್ರೇರಿತರಾಗಿ ನಿರ್ಬಂಧ ಹಾಕಿಕೊಳ್ಳುವುದರಿಂದ ಅವರಿಗೆ ಆಗುವ ನಷ್ಟವನ್ನು ನಿವಾರಿಸಬೇಕು. ಫಲಾನುಭವಿಗಳಿಗೆ ಮುಂಚಿತವಾಗಿ ಎರಡು ತಿಂಗಳ ಪಿಂಚಣಿ ನೀಡಬೇಕು. ಜನರಿಗೆ ದಿನಸಿ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳ ಪೂರೈಕೆಯಾಗಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸದರು. 

SCROLL FOR NEXT