ರಾಜ್ಯ

ಪೊಲೀಸರು ಕ್ರಮ ಕೈಗೊಂಡರೆ ನನ್ನನ್ನು ದೂಷಿಸಬೇಡಿ: ಜನತೆಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ 

Sumana Upadhyaya

ಬೆಂಗಳೂರು:ನಾಳೆ ಯುಗಾದಿ ಹಬ್ಬದ ಖರೀದಿಗಾಗಿ ಯಾರೂ ಮಾರುಕಟ್ಟೆಗೆ ಹೋಗಿ ಜನದಟ್ಟಣೆಯಲ್ಲಿ ಸೇರಬೇಡಿ, ಸಾಧ್ಯವಾದಷ್ಟು ಮಾರ್ಚ್ 31ರವರೆಗೆ ಮನೆಬಿಟ್ಟು ಹೊರಗೆ ಹೋಗಬೇಡಿ, ಅಗತ್ಯ ತುರ್ತು ಕೆಲಸಗಳಿದ್ದರೆ ಮಾತ್ರ ಹೊರಹೋಗಿ ಎಂದು ಸಿಎಂ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.


ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಾರ್ಚ್ 31ರವರೆಗೆ ಕರೆ ನೀಡಿರುವ ಸಂಪೂರ್ಣ ಲಾಕ್ ಡೌನ್ ಗೆ ಎಲ್ಲ ಜನರ ಸಹಕಾರ ಅತ್ಯಗತ್ಯ. ಪ್ರಧಾನ ಮಂತ್ರಿಯವರೇ ಜನರು ಮನೆಯಲ್ಲಿಯೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ನಿನ್ನೆ ರಾತ್ರಿಯಿಂದ ವಿಮಾನ ಹಾರಾಟಗಳನ್ನು ನಿಷೇಧಿಸಲಾಗಿದೆ ಎಂದ ಮೇಲೆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಜನರು ಮನೆಬಿಟ್ಟು ಸುಖಾಸುಮ್ಮನೆ ಹೊರಗೆ ಬಂದರೆ ಪೊಲೀಸರು ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಜಿಲ್ಲೆಗಳಲ್ಲಿ ಅದರಲ್ಲೂ ಬೆಂಗಳೂರು ಮಹಾನಗರ ಜನತೆಗೆ ಈ ಸಂದರ್ಭದಲ್ಲಿ ನಾನು ಅಂತಿಮ ಎಚ್ಚರಿಕೆ ಮತ್ತು ಮನವಿ ಮಾಡಿಕೊಳ್ಳುತ್ತಿದ್ದೇನೆ, ಸಾಧ್ಯವಾದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೊರೋನಾ ವೈರಸ್ ನಿಯಂತ್ರಣಕ್ಕೆ ನಾವು ಸಾಧ್ಯವಾದಷ್ಟು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಅಷ್ಟಕ್ಕೂ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ಕ್ರಮ ಕೈಗೊಂಡರೆ ರಾಜ್ಯ ಸರ್ಕಾರ ಅಥನಾ ನನ್ನನ್ನು ದೂಷಿಸಬೇಡಿ ಎಂದು ಎಚ್ಚರಿಕೆ ನೀಡಿದರು. 

ಜನರು ಯುಗಾದಿ ಹಬ್ಬವನ್ನು ಮನೆಯಲ್ಲೇ ಆಚರಿಸಿ, ಆಡಂಬರದ ಹಬ್ಬ ಆಚರಣೆ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡರು. ಯುಗಾದಿ ಹಬ್ಬಕ್ಕಾಗಿ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಮಾರ್ಕೆಟ್‌ಗಳಿಗೆ ಹೋಗುವುದು ಬೇಡ ಎಂದು ವಿನಂತಿಸಿಕೊಂಡರು. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಲು, ಹಣ್ಣು, ತರಕಾರಿ ಪೂರೈಕೆಗೆ ಪೊಲೀಸರು ಅಡ್ಡಿ ಪಡಿಸಬಾರದು, ರಾಜ್ಯದಲ್ಲಿ ಕರ್ಪ್ಯೂ ವಾತಾವರಣ ಇರುವುದರಿಂದ ಜನರು ಕಾರಿನಲ್ಲಿ, ದ್ವಿಚಕ್ರ ವಾಹನದಲ್ಲಿ ಓಡಾಟನಡೆಸಬಾರದು. ಒಂದು ವೇಳೆ ವಿನಾಕಾರಣ ಮನೆಯಿಂದ ಹೊರಗಡೆ ಬಂದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

SCROLL FOR NEXT