ರಾಜ್ಯ

ಅಕ್ರಮ ನೇಮಕ: 59 ಸಹಾಯಕ ಅಭಿಯೋಜಕರು, ವಕೀಲರ ಅಮಾನತು

Shilpa D

ಬೆಂಗಳೂರು: ರಾಜ್ಯ ಅಭಿಯೋಗ ಇಲಾಖೆಗೆ ಅಕ್ರಮವಾಗಿ ನೇಮಕಗೊಂಡ ಆರೋಪಕ್ಕೆ ಒಳಗಾಗಿರುವ 59 ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ಸಹಾಯಕ ಸರ್ಕಾರಿ ವಕೀಲರನ್ನು (ಎಎಪಿ) ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2013–14ನೇ ಸಾಲಿನ ಎಪಿಪಿ ನೇಮಕಾತಿ ಪರೀಕ್ಷೆ ಅಕ್ರಮ ಕುರಿತು ದೂರು ದಾಖಲಿಸಿಕೊಂಡಿದ್ದ ಇಲ್ಲಿನ 23ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿತ್ತು.

ಉತ್ತರಪತ್ರಿಕೆಗಳ ಮೌಲ್ಯಮಾಪನದ ಬಳಿಕ ಅಂಕಗಳನ್ನು ತಿದ್ದಲಾಗಿದೆ ಎಂದು ದೃಢಪಡಿಸಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ನೀಡಿದ ವರದಿ ಹಾಗೂ ಮೌಲ್ಯಮಾಪಕರು ಮತ್ತು ಪರೀಕ್ಷಾ ಮೇಲ್ವಿಚಾರಕರ ಹೇಳಿಕೆ ಆಧರಿಸಿ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಿದ್ದ ಲೋಕಾಯುಕ್ತ ಪೊಲೀಸರು, ಎಎಪಿಗಳ ಅಮಾನತಿಗೆ ಶಿಫಾರಸು ಮಾಡಿದ್ದರು.

ಎರಡು ವರ್ಷಗಳ ಬಳಿಕ ಈ ಶಿಫಾರಸು ಒಪ್ಪಿಕೊಂಡ ಸರ್ಕಾರ ಅಮಾನತು ಆದೇಶ ಹೊರಡಿಸಿದೆ. ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ವಿಚಾರಣೆಯನ್ನು ಬಾಕಿ ಉಳಿಸಿ, ನಾಗರಿಕ ಸೇವಾ ನಿಯಮಾವಳಿಯ ನಿಯಮ 10 (1)(ಸಿ) ಮತ್ತು (ಡಿ) ಅಡಿ 59 ಜನರನ್ನು ಸೇವೆಯಿಂದ ಅಮಾನತು ಮಾಡಿದೆ.

ಈ ತಂಡದಲ್ಲಿ ಒಟ್ಟು 61 ಎಎಪಿಗಳು ನೇಮಕಗೊಂಡಿದ್ದರು. ಈ ಪೈಕಿ ಒಬ್ಬರು ಭ್ರಷ್ಟಾಚಾರ ಆರೋಪದ ಮೇಲೆ ಈಗಾಗಲೇ ಸಸ್ಪೆಂಡ್‌ ಆಗಿದ್ದಾರೆ. ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

‘ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿದ್ದ ನೈಜ ಅಂಕಗಳಿಗೆ ಬದಲಾಗಿ ಹೆಚ್ಚುವರಿ ಅಂಕಗಳನ್ನು ನೀಡಲಾಗಿದೆ. ಅಭ್ಯರ್ಥಿಗಳಿಂದ ಬದಲಿ ಉತ್ತರ ಬರೆಯಿಸಿ ನಕಲಿ ಮೌಲ್ಯಮಾಪನ ಮಾಡಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಆರೋಪಿಸಿದ್ದಾರೆ.

SCROLL FOR NEXT