ರಾಜ್ಯ

ಸಾಲು ಸಾಲಾಗಿ ನಿಂತ ಜನ:  ಇಂದಿರಾ ಕ್ಯಾಂಟೀನ್ ದಿಢೀರ್ ಬಂದ್ ಮಾಡಿದ ರಾಜ್ಯ ಸರ್ಕಾರ 

Sumana Upadhyaya

ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್‌ ಇರುವುದರಿಂದ ಬಡವರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ತಿಂಡಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಆದರೆ ಇದೀಗ ದಿಢೀರ್ ಆಗಿ ಇಂದಿರಾ ಕ್ಯಾಂಟೀನನ್ನು ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ. 


ಸ್ವತಃ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರೇ ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ-ತಿಂಡಿ ಸಿಗುತ್ತದೆ ಎಂದು ಇಂದು ಬೆಳಗ್ಗೆ ಕ್ಯಾಂಟೀನ್ ಮುಂದೆ ಜನರ ನೂಕುನುಗ್ಗಲು ಉಂಟಾಯಿತು. ಇದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ ತೆರೆಯದೇ ಇರಲು ನಿರ್ಧರಿಸಲಾಗಿದೆ. 


ಕೆಲವೊಂದು ಹೋಟೆಲ್‌ ಕಿಚನ್‌ಗಳಿಂದ ಪಾರ್ಸೆಲ್‌ ತರಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಜನರು ಕೊರೊನಾ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದು ಜನರು ಸಹಕಾರ ನೀಡಬೇಕು ಎಂದು ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

SCROLL FOR NEXT