ರಾಜ್ಯ

ಕೋವಿಡ್-19 ತಡೆಗಟ್ಟಲು ರಾಜ್ಯದ ಕೈದಿಗಳಿಂದ ದಿನಕ್ಕೆ 5,000 ಮಾಸ್ಕ್ ಉತ್ಪಾದನೆ!

Vishwanath S

ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿರುವ ಕೈದಿಗಳು ದಿನಕ್ಕೆ ಸುಮಾರು 5,000 ಮುಖಗವಸುಗಳನ್ನು ಉತ್ಪಾದಿಸಲಿದ್ದು, ಕೊರೊನವೈರಸ್ ಹರಡುವಿಕೆ ತಡೆಗಾಗಿ ಸದ್ಯ, ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲಿದ್ದಾರೆ.

ರಾಜ್ಯದಾದ್ಯಂತ ಎಂಟು ಕೇಂದ್ರ ಕಾರಾಗೃಹಗಳಿದ್ದು, ಅಲ್ಲಿ ಮುಖಗವಸುಗಳನ್ನು ತಯಾರಿಸಲಾಗುತ್ತದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 2,000 ಮುಖಗವಸುಗಳನ್ನು ತಯಾರಿಸಲಾಗಿದೆ. ರಾಜ್ಯ ಪೊಲೀಸ್ ಪ್ರಧಾನ ಕಚೇರಿ, ಪೊಲೀಸ್ ಆಯುಕ್ತರ ಕಚೇರಿ, ನಗರ ಸಶಸ್ತ್ರ ಮೀಸಲು, ಬಿಡಬ್ಲ್ಯೂಎಸ್ಎಸ್‍ಬಿ ಮತ್ತು ಇತರ ಸಂಸ್ಥೆಗಳಿಗೆ ಸುಮಾರು 17,000 ಮುಖಗವಸುಗಳನ್ನು ಸರಬರಾಜು ಮಾಡಲಾಗುತ್ತಿದೆ.

ಹೊಸದಾಗಿ ಸೇರ್ಪಡೆಯಾದ ಕೈದಿಗಳನ್ನು ಸಾಮಾನ್ಯ ಕೊಠಡಿಗಳಿಗೆ ಸ್ಥಳಾಂತರಿಸುವ ಮೊದಲು ಸಂಪೂರ್ಣವಾಗಿ ತಪಾಸಣೆಗಳಿಗೆ ಒಳಪಡಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಲಾಗುತ್ತದೆ. ಸೋಂಕು ತಡೆಗಟ್ಟುವ ಕ್ರಮವಾಗಿ ಎಲ್ಲಾ ಕಾರಾಗೃಹಗಳ ಒಳಗೆ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಹೊರಗಿನ ವ್ಯಕ್ತಿಯೊಂದಿಗೆ ಕೈದಿಗಳಿಗೆ ಮುಖಾಮುಖಿ ಸಂಪರ್ಕಕ್ಕೆ ಅವಕಾಶ ನೀಡದಿರಲು ಸಂದರ್ಶಕರ ಭೇಟಿ ನಿಲ್ಲಿಸಲಾಗಿದೆ. ಕೈದಿಗಳಿಗೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಫೋನ್‌ಗಳ ಮೂಲಕ ಮಾತನಾಡಲು ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮಂಗಳವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೈದಿಗಳು ನ್ಯಾಯಾಲಯ ಹಾಜರಾತಿಯನ್ನು ನಿರ್ಬಂಧಿಸಿ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ಜೈಲು ಆವರಣದ ಸ್ವಚ್ಛತೆ ಮತ್ತು ಕೈದಿಗಳು ಮತ್ತು ಜೈಲು ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಕೈದಿಗಳಿಗೆ ಮತ್ತು ಜೈಲು ಸಿಬ್ಬಂದಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಸೋಂಕು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

SCROLL FOR NEXT