ರಾಜ್ಯ

ಕೊರೋನಾ ಭೀತಿ: ಸ್ವಯಂ ಪ್ರೇರಿತವಾಗಿ ಊರನ್ನೇ ಬಂದ್ ಮಾಡಿದ ಗ್ರಾಮಸ್ಥರು!

Manjula VN

ಮೈಸೂರು: ವಿಶ್ವದಾದ್ಯಂತ ಕೊರೋನಾವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಸೋಂಕು ಹಿನ್ನೆಲೆಯಲ್ಲಿ ಜನರು ಮನೆಗಳಿಂದ ಹೊರಬರುವುದಕ್ಕೂ ಆತಂಕ ಪಡುತ್ತಿದ್ದಾರೆ. ಒಂದೆಡೆ ನಗರ ಜನತೆ ಪರಿಸ್ಥಿತಿಯ ಸೂಕ್ಷ್ಮತೆಯನ್ನೇ ಅರಿಯದೆ ವರ್ತಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಮಗಳಲ್ಲಿರುವ ಜನತೆ ಸೂಕ್ಷ್ಮತೆಯನ್ನರಿತು ಸ್ವಯಂಪ್ರೇರಿತರಾಗಿ ರಸ್ತೆಗಳಿಗೆ ಬೇಲಿ ಹಾಕಿ ಊರಿನ್ನು ಕಾಯಲು ಆರಂಭಿಸಿದ್ದಾರೆ. 

ರಸ್ತೆಗಳಿಗೆ ಬೇಲಿ ಹಾಕಿರುವ ಗ್ರಾಮಸ್ಥರು, ಊರಿನ ಹೊರಗೆ ಯಾರೂ ಹೋಗದಂತೆ ಹಾಗೂ ಊರಿನ ಒಳಗೆ ಯಾರು ಬಾರದಂತೆ ಕಾಯುತ್ತಿದ್ದಾರೆ. 

ಹಾಸನ ಜಿಲ್ಲೆಯ ಹರದನಹಳ್ಳಿಯ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಊರನ್ನು ಕಾಯುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಊರಿನ ಗ್ರಾಮಸ್ಥ ಮಂಜುನಾಥ್ ಎಂಬುವವರು, ಗ್ರಾಮವನ್ನು ರಕ್ಷಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.  ಸರ್ಕಾರದ ನಿಯಮಗಳನ್ನು ಅನುಸರಿಸಲಾಗುತ್ತಿದೆ. ನಿರ್ಲಕ್ಷ್ಯದಿಂದ ದೊಡ್ಡ ದುರಂತ ಸಂಭವಿಸಬಹುದು ಎಂದು ಹೇಳಿದ್ದಾರೆ. 

ಚಾಮರಾಜನಗರ ಜಿಲ್ಲೆ ಹೊಂಗನೂರು ಗ್ರಾಮದಲ್ಲಿಯೂ ಇಂತಹದ್ದೇ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವವರಿಗೆ ರೂ.1,000ದಿಂದ 2,000ದವರೆಗೆ ದಂಡ ವಿಧಿಸಲು ಗ್ರಾಮದ ಮುಖ್ಯಸ್ಥರು ನಿರ್ಧರಿಸಿದ್ದಾರೆ. 

ಈ ನಡುವೆ ವೈಕೆ. ಮೋಳೆ ಗ್ರಾಮದ ಬಾಗಿಲನ್ನು ಈಗಾಗಲೇ ಮುಚ್ಚಲಾಗಿದ್ದು, ಸಂಬಂಧಿಕರು ಹಾಗೂ ಸ್ನೇಹಿತರ ಭೇಟಿಗೂ ಅವಕಾಶ ನೀಡಲಾಗುತ್ತಿಲ್ಲ ಎಂದು ತಿಲಿದುಬಂದಿದೆ. 

ಗ್ರಾಮದ ಯುವಕರು ಸ್ವಯಂಪ್ರೇರಿತರಾಗಿ ಜವಾಬ್ದಾರಿ ಹೊತ್ತು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸ್ಪೀಕರ್ ಗಳ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಮೈಸೂರಿನ ಹಂಚ್ಯಾ ಸತಗಳ್ಳಿಯಲ್ಲಿಯೂ ಇದೇ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಹೊರಗಿನವರಾರು ಗ್ರಾಮಕ್ಕೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ.  

SCROLL FOR NEXT