ರಾಜ್ಯ

ಕೇರಳ- ಕರ್ನಾಟಕ ಗಡಿ ಬಂದ್: ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!

Nagaraja AB

ಮಂಗಳೂರು: ಗರ್ಭಿಣಿ ಮಹಿಳೆಯಿದ್ದ ಅಂಬ್ಯುಲೆನ್ಸ್ ನ್ನು ಮಂಗಳೂರಿನತ್ತ ಬರಲು ಪೊಲೀಸರು ಬಿಡದ ಕಾರಣ ಬಿಹಾರದಿಂದ ವಲಸೆ ಬಂದಿದ್ದ ಗರ್ಭೀಣಿ ಅಂಬ್ಯುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಗಡಿಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದೆ.  

ಅಂಬ್ಯುಲೆನ್ಸ್ ಸೇರಿದಂತೆ ಕೇರಳದಿಂದ ಯಾವುದೇ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿ ಕರ್ನಾಟಕ ಪೊಲೀಸರು ಗಡಿ ಭಾಗ ತಲಪಾಡಿಯಲ್ಲಿ ಅಂಬ್ಯುಲೆನ್ಸ್ ತಡೆದಿದ್ದಾರೆ. ನಂತರ ಅಂಬ್ಯುಲೆನ್ಸ್ ಚಾಲಕ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಆದರೆ, ಆ ಮಹಿಳೆ ಅಂಬ್ಯುಲೆನ್ಸ್ ನಲ್ಲಿಯೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ ತಿಳಿದುಬಂದಿದೆ.

ಬಿಹಾರದ ಪಾಟ್ನಾದಿಂದ ವಲಸೆ ಬಂದಿದ್ದ 25 ವರ್ಷದ ಗೌರಿ ದೇವಿ ಮತ್ತು ಆಕೆಯ ಪತಿ ಉತ್ತರ ಕೇರಳ ಜಿಲ್ಲೆಯ ಪ್ಲೇವುಡ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಹೆಚ್ಚಿನ ಸಂಖ್ಯೆಯ ಕೊರೋನಾವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ.

ಕಾಸರಗೋಡು ಸುತ್ತಮುತ್ತಲಿನ ಗಡಿ ಭಾಗದವರು ಹತ್ತಿರದಲ್ಲಿರುವ ಮಂಗಳೂರು ಆಸ್ಪತ್ರೆ ಮೇಲೆ ಹೆಚ್ಚಾಗಿ ಅವಲಂಬನೆಯಾಗಿರುವುದಾಗಿ ಸ್ಥಳೀಯ ಜನರು ಹೇಳುತ್ತಾರೆ. ಅಂಬ್ಯುಲೆನ್ಸ್ ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸುರಕ್ಷಿತವಾಗಿ ಹೆರಿಗೆ ಆಗುವಂತೆ ನೋಡಿಕೊಳ್ಳಲಾಯಿತು. ನಂತರ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಸ್ಥಳಾಂತರಿಸಲಾಗಿದ್ದು, ಅವರಿಬ್ಬರು ಸುರಕ್ಷಿತವಾಗಿರುವುದಾಗಿ  ಚಾಲಕರಾದ ಅಸ್ಲಂ ಮತ್ತು ಮುಸ್ತಫಾ ತಿಳಿಸಿದ್ದಾರೆ.

ಗರ್ಭಿಣಿಯರು ಮಾತ್ರವಲ್ಲ, ನಿತ್ಯ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ರೋಗಿಗಳು, ಹೃದ್ರೋಗಿಗಳು ಮತ್ತಿತರ ತುರ್ತು ಆರೋಗ್ಯ ಚಿಕಿತ್ಸೆ ಬೇಕಾದಂತವರನ್ನು ಕೂಡಾ  ಕರ್ನಾಟಕದವರು ಒಳಗೆ ಬಿಟ್ಟುಕೊಳ್ಳುತ್ತಿಲ್ಲ ಎಂದು ಸ್ಥಳೀಯ ಜನರು ದೂರಿದ್ದಾರೆ.

SCROLL FOR NEXT