ರಾಜ್ಯ

ಗಡಿ ಬಂದ್ ವಿಚಾರ: ಕೇರಳ ಒತ್ತಡಕ್ಕೆ ಮಣಿಯದಂತೆ ಅಧಿಕಾರಿಗಳಿಗೆ ಸೂಚಿಸಿ- ಸಿಎಂಗೆ ಪ್ರತಾಪ್ ಸಿಂಹ ಮನವಿ 

Manjula VN

ಬೆಂಗಳೂರು: ಥಲಶ್ಶೇರಿ-ಕೂರ್ಗ್ ರಾಜ್ಯ ಹೆದ್ದಾರಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ಒತ್ತಡಗಳಿಗೆ ಮಣಿಯದಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. 

ಗಡಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಕೇರಳದ ಮೂಲಭೂತ ವಸ್ತುಗಳ ಲೈಫ್ ಲೈನ್ ಆಗಿರುವ ಥಲಶ್ಶೇರಿ-ಕೂರ್ಗ್ ಹೆದ್ದಾರಿಯನ್ನು ಕರ್ನಾಟಕ ಪೊಲೀಸರು ಬಂದ್ ಮಾಡಿದ್ದಾರೆ. ಒಂದು ವೇಳೆ ಪರಿಸ್ಥಿತಿ ಹೀಗೇ ಮುಂದುವರೆದಿದ್ದೇ ಆದರೆ, ಆಗತ್ಯ ವಸ್ತುಗಳ ಸಾಗಾಟ ಮಾಡುವ ಲಾರಿಗಳು ಹಾಗೂ ಇನ್ನಿತರ ಟ್ರಕ್ ಗಳು ಅನ್ಯ ಮಾರ್ಗದಲ್ಲಿ ಕೇರಳಕ್ಕೆ ಆಗಮಿಸುವ ದೀರ್ಘವಧಿಯ ರಸ್ತೆಯನ್ನು ಅವಲಂಭಿಸಬೇಕಾಗುತ್ತದೆ. 

ಕೊರೋನಾ ಸೃಷ್ಟಿಸಿದ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಈ ವಿಚಾರದಲ್ಲಿ ಶೀಘ್ರವೇ ಮಧ್ಯಸ್ಥಿಕೆ ವಹಿಸಬೇಕು ಎಂದು ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದರು. 

ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿರುವ ವಿಜಯ್ ಭಾಸ್ಕರ್ ಅವರು, ಕೇರಳ ಸರ್ಕಾರದ ಒತ್ತಡಕ್ಕೆ ಮಣಿಯದಂತೆ ಸೂಚಿಸಿ. ಹಾಗೂ ಗಡಿ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. 

ನಾವು ಕೊಡಗಿನವರು ಹಾಗೂ ಎಲ್ಲಾ ಜನಪ್ರತಿನಿಧಿಗಳು ಗಡಿ ಮಾರ್ಗ ಬಂದ್ ಮಾಡಲು ನಿರ್ಧರಿಸಿದ್ದೇವೆ. ಕೇರಳದ ಮೊನ್ನೂರಿನಲ್ಲಿ ಹಲವು ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ರಸ್ತೆ ತೆರೆಯುವುದರಿಂದ ರಾಜ್ಯಕ್ಕೆ ಮತ್ತಷ್ಟು ಅಪಾಯಗಳು ಎದುರಾಗಲಿವೆ ಎಂದು ತಿಳಿಸಿದ್ದಾರೆ. 

SCROLL FOR NEXT